ADVERTISEMENT

ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆಗೆ ಅವಕಾಶ ಇಲ್ಲ

ಬಡ್ಡಿ ದರ ಇಳಿಕೆ ಹಿನ್ನೆಲೆ; ಆರ್‌ಬಿಐ ನಿರ್ಧಾರ

ಪಿಟಿಐ
Published 28 ಮೇ 2020, 19:45 IST
Last Updated 28 ಮೇ 2020, 19:45 IST
   

ನವದೆಹಲಿ: ಸರ್ಕಾರಿ ಅಥವಾ ಆರ್‌ಬಿಐ ಬಾಂಡ್‌ ಹೆಸರಿನಿಂದ ಜನಪ್ರಿಯವಾಗಿರುವ ತೆರಿಗೆಗೆ ಒಳಪಟ್ಟಿರುವ ಉಳಿತಾಯ ಬಾಂಡ್‌ ಯೋಜನೆಯನ್ನು ಕೇಂದ್ರ ಸರ್ಕಾರ ವಾ‍ಪಸ್‌ ಪಡೆದಿದೆ.

ಅಸಲಿನ ಸುರಕ್ಷತೆ ಮತ್ತು ನಿಯಮಿತ ಆದಾಯದ ಕಾರಣಕ್ಕೆ ಸಾಮಾನ್ಯ ಹೂಡಿಕೆದಾರರಲ್ಲಿ ಈ ಬಾಂಡ್‌ಗಳು ಹೆಚ್ಚು ಜನಪ್ರಿಯವಾಗಿವೆ. ಅನಿವಾಸಿ ಭಾರತೀಯರು ಈ ಬಾಂಡ್‌ಗಳಲ್ಲಿ ಹಣ ತೊಡಗಿಸಲು ಅರ್ಹತೆ ಹೊಂದಿಲ್ಲ.

ಶೇ 7.75 ಬಡ್ಡಿ ದರದ ಉಳಿತಾಯ (ತೆರಿಗೆಗೆ ಒಳಪಟ್ಟ) ಬಾಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವುದು ಗುರುವಾರದ ಬ್ಯಾಂಕಿಂಗ್‌ ವಹಿವಾಟು ಕೊನೆಗೊಂಡ ನಂತರ ಸ್ಥಗಿತಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ADVERTISEMENT

ಪ್ರತಿ ₹ 100ಗೆ ಒಂದು ಬಾಂಡ್‌ ನೀಡಲಾಗುತ್ತಿತ್ತು. ಕನಿಷ್ಠ ಹೂಡಿಕೆ ₹ 1,000 ಇತ್ತು. ಏಳು ವರ್ಷಗಳ ನಂತರ ಬಾಂಡ್‌ಗಳಲ್ಲಿ ತೊಡಗಿಸಿದ ಹಣವನ್ನು ಸರ್ಕಾರ ಹೂಡಿಕೆದಾರರಿಗೆ ಮರಳಿಸುತ್ತಿತ್ತು.

ಭಾರತೀಯ ರಿಸರ್ವ್‌ ಬ್ಯಾಂಕ್‌ ಇತ್ತೀಚಿನ ದಿನಗಳಲ್ಲಿ ರೆಪೊ ದರಗಳನ್ನು ಗಮನಾರ್ಹವಾಗಿ ತಗ್ಗಿಸಿರುವುದರಿಂದ ಬ್ಯಾಂಕ್‌ ಸಾಲ ಮತ್ತು ಸ್ಥಿರ ಠೇವಣಿ ಬಡ್ಡಿ ದರಗಳೂ ಕಡಿಮೆಯಾಗುತ್ತಿವೆ.

‘ಕ್ರೂರ ಪ್ರಹಾರ’: ಚಿದಂಬರಂ ಟೀಕೆ

ಆರ್‌ಬಿಐ ಬಾಂಡ್‌ ಯೋಜನೆ ಮುಂದುವರೆಸುವುದನ್ನು ಕೈಬಿಟ್ಟಿರುವ ಸರ್ಕಾರದ ನಿರ್ಧಾರವು ನಾಗರಿಕರ ಮೇಲಿನ ‘ಕ್ರೂರ ಪ್ರಹಾರ’ವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಟೀಕಿಸಿದ್ದಾರೆ.

ಜನರ ಉಳಿತಾಯ ಪ್ರವೃತ್ತಿಗೆ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರ ಪಾಲಿಗೆ ಇದೊಂದು ದೊಡ್ಡ ಹೊಡೆತವಾಗಿದ್ದು, ಬಾಂಡ್‌ ಯೋಜನೆ ಮುಂದುವರೆಸಲು ಜನರು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದ್ದಾರೆ.

‘ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಮತ್ತು ಅಂಚೆ ಕಚೇರಿ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಗಮನಾರ್ಹವಾಗಿ ತಗ್ಗಿರುವಾಗ, ಆರ್‌ಬಿಐ ಬಾಂಡ್‌ ಕೈಬಿಟ್ಟಿರುವುದು ಇನ್ನೊಂದು ಹೊಡೆತವಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಸರ್ಕಾರ ಈ ಹಿಂದೆಯೂ 2018ರ ಜನವರಿಯಲ್ಲಿ ಇದನ್ನು ಕೈಬಿಟ್ಟಿತ್ತು. ಆ ಸಂದರ್ಭದಲ್ಲಿಯೂ ನಾನು ಅದನ್ನು ತೀವ್ರವಾಗಿ ವಿರೋಧಿಸಿದ್ದೆ. ಮರು ದಿನವೇ ಸರ್ಕಾರ ತನ್ನ ನಿರ್ಧಾರ ಬದಲಿಸಿತ್ತು. ಆದರೆ ಬಡ್ಡಿ ದರವನ್ನು ಶೇ 8 ರಿಂದ ಶೇ 7.75ಕ್ಕೆ ಇಳಿಸಿತ್ತು.

‘ತೆರಿಗೆ ಪಾವತಿಸಿದ ನಂತರ ಬಾಂಡ್‌ ಗಳಿಕೆ ಕೇವಲ ಶೇ 4.4ರಷ್ಟು ಇರಲಿತ್ತು. ಅದನ್ನೂ ಈಗ ಕಿತ್ತುಕೊಳ್ಳಲಾಗಿದೆ. ಇದನ್ನು ನಾನು ಬಲವಾಗಿ ವಿರೋಧಿಸುವೆ. ಯಾವುದೇ ಸರ್ಕಾರವು ತನ್ನ ನಾಗರಿಕರಿಗೆ ಕನಿಷ್ಠ ಒಂದಾದರೂ ಗರಿಷ್ಠ ಸುರಕ್ಷತೆಯ ಹೂಡಿಕೆ ಅವಕಾಶ ಕಲ್ಪಿಸಿಕೊಡಬೇಕು. 2003 ರಿಂದ ಆರ್‌ಬಿಐ ಬಾಂಡ್‌ ಅಂತಹ ಅವಕಾಶ ಕಲ್ಪಿಸಿತ್ತು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.