ADVERTISEMENT

ಫೇಮ್–3 ಜಾರಿಗೆ ಸಿದ್ಧತೆ: ಸಚಿವ ಎಚ್‌.ಡಿ. ಕುಮಾರಸ್ವಾಮಿ

ಇ.ವಿ, ಹೈಬ್ರಿಡ್‌ ವಾಹನ ಬಳಕೆಗೆ ಉತ್ತೇಜನ: ಎಚ್‌ಡಿಕೆ

ಪಿಟಿಐ
Published 16 ಜುಲೈ 2024, 14:50 IST
Last Updated 16 ಜುಲೈ 2024, 14:50 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ದೇಶದಲ್ಲಿ ವಿದ್ಯುತ್‌ ಚಾಲಿತ ಹಾಗೂ ಹೈಬ್ರಿಡ್‌ ವಾಹನಗಳ ತಯಾರಿಕೆ ಮತ್ತು ಬಳಕೆಗೆ ಉತ್ತೇಜನ ನೀಡುವ ಸಂಬಂಧ 3ನೇ ಹಂತದ ‘ಫೇಮ್‌’  ಯೋಜನೆಯ ಅನುಷ್ಠಾನಕ್ಕೆ ಸರ್ಕಾರವು ಸಿದ್ಧತೆ ನಡೆಸಿದೆ’ ಎಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆಗಳ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

ವಿದ್ಯುತ್‌ ಚಾಲಿತ ಮತ್ತು ಹೈಬ್ರಿಡ್‌ ವಾಹನಗಳ ತಯಾರಿಕೆ ಮತ್ತು ಬಳಕೆಯನ್ನು ತ್ವರಿತಗೊಳಿಸುವ ‘ಫೇಮ್‌–2’ ಯೋಜನೆಯು ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ಮುಕ್ತಾಯಗೊಂಡಿದೆ.

ADVERTISEMENT

‘ಇದೇ 23ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಯ ಮುಂದುವರಿಕೆ ಬಗ್ಗೆ ಸರ್ಕಾರ ಕ್ರಮಕೊಳ್ಳಲಿದೆಯೇ’ ಎಂಬ ಪತ್ರಕರ್ತರ ಪ್ರಶ್ನೆಗೆ ಸಚಿವರು ಸ್ಪಷ್ಟ ಉತ್ತರ ನೀಡಲಿಲ್ಲ.

‘ಫೇಮ್‌– 3 ಯೋಜನೆಯನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ಹಲವು ಸಚಿವಾಲಯಗಳಿಂದ ಶಿಫಾರಸು ಸಲ್ಲಿಕೆಯಾಗಿವೆ. ಮುಂಬರುವ ದಿನಗಳಲ್ಲಿ ಯೋಜನೆ ಜಾರಿಯಾಗಲಿದೆ’ ಎಂದು ಹೇಳಿದರು.

‘ಹೈಬ್ರಿಡ್‌ ವಾಹನಗಳ ಮೇಲೆ ತೆರಿಗೆ ಕಡಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಟ್ಟಿಗೆ ಚರ್ಚಿಸಲಾಗುವುದು. ಅವರೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಕುರಿತು ಹಣಕಾಸು ಸಚಿವಾಲಯವು ರೂಪರೇಷೆಯನ್ನು ಸಿದ್ಧಪಡಿಸಲಿದೆ’ ಎಂದು ವಿವರಿಸಿದರು.

ಸಚಿವಾಲಯವು ಹೈಬ್ರಿಡ್‌ ವಾಹನಗಳ ತೆರಿಗೆ ಕಡಿತದ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಲಿದೆಯೇ ಎಂಬ ಪ್ರಶ್ನೆಗೆ, ‘ಮುಂದಿನ ವಾರ ಬಜೆಟ್‌ ಮಂಡನೆಯಾಗಲಿದೆ. ಅಲ್ಲಿಯವರೆಗೂ ಕಾದು ನೋಡಿ’ ಎಂದು ಉತ್ತರಿಸಿದರು.

ದೇಶದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಉದ್ಯಮದ ಬೆಳವಣಿಗೆಗೆ ಎದುರಾಗಿರುವ ಸವಾಲುಗಳನ್ನು ಎದುರಿಸಲು ಸಚಿವಾಲಯವು ಸಿದ್ಧವಿದೆ. ಲಭ್ಯವಿರುವ ಅವಕಾಶವನ್ನು ಬಳಸಿಕೊಂಡು ಈ ಉದ್ಯಮದ ಅಭಿವೃದ್ಧಿಗೆ ಒತ್ತು ನೀಡಲಿದೆ ಎಂದರು.

ಸಚಿವಾಲಯ ಹೇಳಿದ್ದೇನು?:

ಇ.ವಿಗಳಿಗೆ ಫೇಮ್‌–2 ಅಡಿ ಮಾರ್ಚ್‌ 31ರ ವರೆಗೆ ಸಬ್ಸಿಡಿ ಪಡೆಯಬಹುದಾಗಿದೆ ಅಥವಾ ಸಬ್ಸಿಡಿ ಮೊತ್ತದ ಎಲ್ಲಿಯವರೆಗೆ ಲಭ್ಯವಿದೆಯೋ ಅಲ್ಲಿಯವರೆಗೆ ಸೌಲಭ್ಯ ದೊರೆಯಲಿದೆ. ಸದ್ಯ ಈ ಯೋಜನೆಗೆ ನಿಗದಿಪಡಿಸಿರುವ ಅನುದಾನವನ್ನು ₹10 ಸಾವಿರ ಕೋಟಿಯಿಂದ ₹11,500 ಕೋಟಿಗೆ ಹೆಚ್ಚಿಸಲಾಗುವುದು ಎಂದು ಬೃಹತ್‌ ಕೈಗಾರಿಕಾ ಸಚಿವಾಲಯವು ಈ ವರ್ಷದ ಆರಂಭದಲ್ಲಿಯೇ ಹೇಳಿತ್ತು.

ಎಚ್.ಡಿ. ಕುಮಾರಸ್ವಾಮಿ
ಇ.ವಿ ಉದ್ಯಮವು ಆರ್ಥಿಕತೆ ಪ್ರಗತಿಗೆ ನೆರವಾಗಲಿದೆ. ಇಂಧನದ ಭದ್ರತೆ ನೀಡುವ ಜೊತೆಗೆ ಸುಸ್ಥಿರ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ
ಎಚ್.ಡಿ. ಕುಮಾರಸ್ವಾಮಿ ಸಚಿವ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ

‘ಸರ್ಕಾರದ ಜತೆ ಟೆಸ್ಲಾ ಚರ್ಚಿಸಿಲ್ಲ’

ಅಮೆರಿಕದ ಕಾರು ತಯಾರಿಕಾ ಕಂಪನಿ ಟೆಸ್ಲಾ ಭಾರತದಲ್ಲಿ ತನ್ನ ಘಟಕ ಸ್ಥಾಪನೆಗೆ ಮುಂದಾಗಿದೆ. ಈ ಕಂಪನಿಗೆ ಅನುಕೂಲ ಕಲ್ಪಿಸಲು ಕೇಂದ್ರವು  ಹೊಸ ಇ.ವಿ ನೀತಿ ರೂಪಿಸಿದೆ ಎಂದು ಹೇಳಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ ‘ಹೊಸ ಇ.ವಿ ನೀತಿ ಅನುಸಾರ ಭಾರತದಲ್ಲಿ ಹೂಡಿಕೆ ಸಂಬಂಧ ಟೆಸ್ಕಾ ಕಂಪನಿಯು ಸರ್ಕಾರದ ಜೊತೆಗೆ ಚರ್ಚಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.