ADVERTISEMENT

ಜಾಹೀರಾತು ವಲಯ: ₹1.64 ಲಕ್ಷ ಕೋಟಿ ವರಮಾನ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 15:53 IST
Last Updated 15 ಫೆಬ್ರುವರಿ 2025, 15:53 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ದೇಶದ ಜಾಹೀರಾತು ವಲಯವು ಶೇ 7ರಷ್ಟು ಬೆಳವಣಿಗೆ ಕಾಣಲಿದೆ ಎಂದು ಮಾಧ್ಯಮ ಹೂಡಿಕೆ ಸಂಸ್ಥೆಯಾದ ಗ್ರೂಪ್‌ಎಂ ಇಂಡಿಯಾ ಅಂದಾಜಿಸಿದೆ. 

ಈ ವಲಯದಲ್ಲಿ ಒಟ್ಟು ₹1.64 ಲಕ್ಷ ಕೋಟಿ ವರಮಾನ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಪ್ರಸಕ್ತ ಮತ್ತು ಮುಂದಿನ ವರ್ಷಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ಸಿದ್ಧಪಡಿಸಿರುವ ವರದಿಯಲ್ಲಿ ವಿವರಿಸಲಾಗಿದೆ.

‘ಜಾಗತಿಕಮಟ್ಟದಲ್ಲಿ ಜಾಹೀರಾತಿಗಾಗಿ ₹87 ಲಕ್ಷ ಕೋಟಿ (1 ಟ್ರಿಲಿಯನ್‌ ಡಾಲರ್) ಖರ್ಚು ಮಾಡಲಾಗುತ್ತಿದೆ. ಭಾರತವು 4ನೇ ಅತಿದೊಡ್ಡ ಜಾಹೀರಾತು ಮಾರುಕಟ್ಟೆಯಾಗಿದೆ. ಶೇ 60ರಷ್ಟು ಜಾಹೀರಾತು ಪಾಲನ್ನು ಡಿಜಿಟಲ್‌ ಮಾರುಕಟ್ಟೆ ಹೊಂದಿದೆ’ ಎಂದು ಗ್ರೂ‍ಪ್‌ ಎಂನ ದಕ್ಷಿಣ ಏಷ್ಯಾ ವಿಭಾಗದ ಸಿಇಒ ಪ್ರಶಾಂತ್‌ ಕುಮಾರ್ ಹೇಳಿದ್ದಾರೆ.

ADVERTISEMENT

‘ಗ್ರಾಹಕರ ಬೇಡಿಕೆ ಮತ್ತು ಡಿಜಿಟಲ್‌ ಪ್ರಭಾವದಿಂದಾಗಿ ದೇಶದ ಜಾಹೀರಾತು ವಲಯವು ಬದಲಾವಣೆಗೊಂಡಿದೆ. ಡಿಜಿಟಲ್ ಮತ್ತು ಟಿ.ವಿ ಮಾಧ್ಯಮವು ಶೇ 86ರಷ್ಟು ಜಾಹೀರಾತು ಪಾಲನ್ನು ಹೊಂದಿವೆ’ ಎಂದು ಕಂಪನಿಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಅಶ್ವಿನ್‌ ಪದ್ಮನಾಭನ್ ಹೇಳಿದ್ದಾರೆ.

ಎಂಎಸ್‌ಇ, ರಿಯಾಲ್ಟಿ, ಶಿಕ್ಷಣ, ಬಿಎಫ್‌ಎಸ್‌ಐ, ತಂತ್ರಜ್ಞಾನ, ಟೆಲಿಕಾಂ ವಲಯವು ಒಟ್ಟು ‌ಜಾಹೀರಾತಿನಲ್ಲಿ ಶೇ 60ರಷ್ಟು ಕೊಡುಗೆ ನೀಡಲಿವೆ. ವಿದ್ಯುತ್‌ಚಾಲಿತ ವಾಹನ, ಫಿನ್‌ಟೆಕ್‌ ಮತ್ತು ಗೇಮಿಂಗ್ ಕ್ಷೇತ್ರ ಕೂಡ ಜಾಹೀರಾತು ವಲಯಕ್ಕೆ ಹೆಚ್ಚಿನ ಕೊಡುಗೆ ನೀಡಲಿವೆ ಎಂದು ಹೇಳಿದ್ದಾರೆ.

ದೇಶದ ಜಾಹೀರಾತು ಮಾರುಕಟ್ಟೆ ಸದೃಢವಾಗಿದೆ ಎಂದು ಕಂಪನಿಯ ವ್ಯಾಪಾರ ತಂತ್ರಗಾರಿಕೆ ವಿಭಾಗದ ಮುಖ್ಯಸ್ಥ ಪ್ರವೀಣ್ ಶೇಖ್‌ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.