ಜಿಎಸ್‌ಟಿ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಆಗಸ್ಟ್ ತಿಂಗಳಿನಲ್ಲಿ ₹1.86 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಜುಲೈನಲ್ಲಿ ಸಂಗ್ರಹವಾಗಿದ್ದ ₹1.96 ಲಕ್ಷ ಕೋಟಿಗೆ ಹೋಲಿಸಿದರೆ ವರಮಾನ ಕಡಿಮೆಯಾಗಿದೆ. ಆದರೆ 2024ರ ಆಗಸ್ಟ್‌ನಲ್ಲಿ ₹1.75 ಲಕ್ಷ ಕೋಟಿ ಸಂಗ್ರಹವಾಗಿದ್ದು, ಇದಕ್ಕೆ ಹೋಲಿಸಿದರೆ ವರಮಾನ ಶೇ 6ರಷ್ಟು ಏರಿಕೆಯಾಗಿದೆ.
ದೇಶಿ ವಹಿವಾಟುಗಳ ಮೂಲಕ ಸಂಗ್ರಹವಾದ ಜಿಎಸ್‌ಟಿ ವರಮಾನ ಶೇ 9.6ರಷ್ಟು ಏರಿಕೆಯಾಗಿದ್ದು, ₹1.37 ಲಕ್ಷ ಕೋಟಿ ಸಂಗ್ರಹವಾಗಿದೆ. ಆಮದು ವಹಿವಾಟು ಮೂಲಕ ₹49,354 ಕೋಟಿ ಸಂಗ್ರಹವಾಗಿದ್ದು, ಶೇ 1.2ರಷ್ಟು ಕಡಿಮೆಯಾಗಿದೆ. ಜಿಎಸ್‌ಟಿ ಮರುಪಾವತಿ ಶೇ 20ರಷ್ಟು ಇಳಿಕೆಯಾಗಿದ್ದು, ₹19,359 ಕೋಟಿಯಾಗಿದೆ. ನಿವ್ವಳ ಜಿಎಸ್‌ಟಿ ವರಮಾನ ₹1.67 ಲಕ್ಷ ಕೋಟಿಯಾಗಿದ್ದು, ಶೇ 10.7ರಷ್ಟು ಹೆಚ್ಚಳವಾಗಿದೆ.
ದೇಶದಲ್ಲಿ ಜನರು ಸರಕುಗಳನ್ನು ಖರೀದಿಸುವ ಪ್ರಮಾಣ ಹೆಚ್ಚಳವಾಗಿದೆ. ಮುಂಬರುವ ಹಬ್ಬದ ಋತುವಿನಲ್ಲಿ ಜಿಎಸ್‌ಟಿ ಸಂಗ್ರಹವು ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.
‘ಆಮದು ವಹಿವಾಟು ಮೂಲಕ ಸಂಗ್ರಹವಾದ ವರಮಾನದ ಪ್ರಮಾಣವು ಇಳಿಕೆಯಾಗಿದೆ. ಜಾಗತಿಕ ಸುಂಕವು ದೇಶದ ರಫ್ತು ವಲಯದ ಮೇಲೆ ಪ್ರಭಾವ ಬೀರಿರುವುದರ ಸ್ಪಷ್ಟ ಸೂಚನೆ ಇದಾಗಿದೆ’ ಎಂದು ಇ.ವೈ. ತೆರಿಗೆ ಪಾಲುದಾರ ಸೌರಭ್ ಅಗರವಾಲ್ ಹೇಳಿದ್ದಾರೆ.
ತಿಂಗಳು;ಜಿಎಸ್‌ಟಿ ಸಂಗ್ರಹ (₹ಲಕ್ಷ ಕೋಟಿಗಳಲ್ಲಿ) ಏಪ್ರಿಲ್;2.37 ಮೇ;2.01 ಜೂನ್;1.84 ಜುಲೈ;1.96 ಆಗಸ್ಟ್;1.86
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.