ನವದೆಹಲಿ: ಜಿಎಸ್‌ಟಿ ದರ ಪರಿಷ್ಕರಣೆಯಿಂದ ರಾಜ್ಯಗಳಿಗೆ ಆಗುವ ವರಮಾನ ನಷ್ಟಕ್ಕೆ ಪರಿಹಾರ ಸಿಗಬೇಕು, ಆರ್ಥಿಕ ಬೆಳವಣಿಗೆಯ ಪ್ರಯೋಜನವು ಎಲ್ಲರಿಗೂ ದೊರೆಯಬೇಕು ಎಂದು ಕೇರಳದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿದ್ದಾರೆ.
ಸಾಮಾನ್ಯ ಜನರಿಗೆ ಜಿಎಸ್‌ಟಿ ದರ ಪರಿಷ್ಕರಣೆಯ ಪ್ರಯೋಜನ ವರ್ಗಾವಣೆ ಆಗಬೇಕು. ವರಮಾನ ನಷ್ಟಕ್ಕೆ ಪರಿಹಾರ ಸಿಗದಿದ್ದರೆ ರಾಜ್ಯಗಳಿಗೆ ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂದು ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಭಾನುವಾರ ಹೇಳಿದ್ದಾರೆ.
ಜಿಎಸ್‌ಟಿ ಪರಿಷ್ಕರಣೆಯನ್ನು ಕೇರಳ ಸ್ವಾಗತಿಸಿದೆ. ಆದರೆ, ವರಮಾನ ನಷ್ಟದ ಪರಿಹಾರ ಕುರಿತು ಆತಂಕ ವ್ಯಕ್ತಪಡಿಸಿದೆ.
ರಾಜ್ಯಗಳ ಹಿತವನ್ನು ಕಾಯುವ ಅಂಶಗಳು ಜಿಎಸ್‌ಟಿ ದರ ಇಳಿಕೆಯ ಪ್ರಕ್ರಿಯೆಯಲ್ಲಿ ಇಲ್ಲವಾದರೆ, ಭವಿಷ್ಯದಲ್ಲಿ ರಾಜ್ಯಗಳ ಹಣಕಾಸಿನ ಸ್ಥಿತಿ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು ಎಂದು ಹೇಳಿದ್ದಾರೆ.
ಜಿಎಸ್‌ಟಿ ಪರಿಷ್ಕರಣೆಯಿಂದ ತೆರಿಗೆ ಕಡಿಮೆ ಆಗಲಿದೆ. ಮುಂದಿನ ದಿನಗಳಲ್ಲಿ ಸರಕುಗಳ ದರವು ಇಳಿಯಲಿದೆ. ಇದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ಆದರೆ, 2017–18ರಲ್ಲಿ ನಡೆದ ಜಿಎಸ್‌ಟಿ ಪರಿಷ್ಕರಣೆಯು ಪ್ರಯೋಜನವನ್ನು ಜನರಿಗೆ ವರ್ಗಾಯಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಜಿಎಸ್‌ಟಿ, ಮಾರಾಟ ತೆರಿಗೆ ಮತ್ತು ಮೌಲ್ಯವರ್ಧಿತ ತೆರಿಗೆಯು (ವ್ಯಾಟ್) ರಾಜ್ಯಗಳ ಪ್ರಮುಖ ವರಮಾನ ಮೂಲಗಳಾಗಿವೆ. ಕೇಂದ್ರವು ಹಲವು ವರಮಾನದ ಮೂಲಗಳನ್ನು ಹೊಂದಿದೆ. ವರಮಾನ ನಷ್ಟಕ್ಕೆ ಪರಿಹಾರ ನೀಡದಿದ್ದರೆ, ಆರೋಗ್ಯ, ಶಿಕ್ಷಣ, ಸಾರ್ವಜನಿಕ ಪಡಿತರ ವ್ಯವಸ್ಥೆಯಂತಹ (ಪಿಡಿಎಸ್) ಸಾಮಾಜಿಕ ಜವಾಬ್ದಾರಿಗಳನ್ನು ರಾಜ್ಯಗಳು ಮುಂದುವರಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯಗಳು ದುರ್ಬಲಗೊಂಡರೆ, ಅಭಿವೃದ್ಧಿ ಎಂದು ಹೇಳುವುದರಲ್ಲಿ ಅರ್ಥವೇನಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 3ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ನಾಲ್ಕು ಹಂತಗಳ ಜಿಎಸ್‌ಟಿಯನ್ನು (ಶೇ 5, ಶೇ 12, ಶೇ 18 ಮತ್ತು ಶೇ 28) ಎರಡು ಹಂತಗಳಿಗೆ (ಶೇ 5 ಮತ್ತು ಶೇ 18) ಇಳಿಸಿದೆ. ಹೊಸ ತೆರಿಗೆ ದರವು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.