ADVERTISEMENT

ಬ್ಲಾಕ್ ಮಾಡಿದ ಜಿಎಸ್‌ಟಿ ಸಂಖ್ಯೆ ಮರುಚಾಲನೆ ವಿಳಂಬ: ಉದ್ಯಮಿಗಳಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 13 ಮೇ 2022, 14:02 IST
Last Updated 13 ಮೇ 2022, 14:02 IST
   

ಬೆಂಗಳೂರು: ಜಿಎಸ್‌ಟಿ ಪಾವತಿ ವಿಳಂಬದ ಕಾರಣಕ್ಕೆ ಉದ್ಯಮಿಯೊಬ್ಬರ ಜಿಎಸ್‌ಟಿಐಎನ್‌ ಸಂಖ್ಯೆಯನ್ನು ಬ್ಲಾಕ್ ಮಾಡಿರುವ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಇಲಾಖೆಗೆ ಇದೀಗ ಅದನ್ನು ಅನ್‌ಬ್ಲಾಕ್ ಮಾಡಲು ಇನ್ನೂ ತಿಳಿಯದ ಕಾರಣ, ಉದ್ಯಮಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಪಾವತಿ ವಿಳಂಬದಿಂದ ರದ್ದಾದ ಜಿಎಸ್‌ಟಿಐಎನ್‌ ಅನ್ನು ದಂಡ ಶುಲ್ಕ ಕಟ್ಟಿದ ಬಳಿಕ ಅನ್‌ಬ್ಲಾಕ್ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ, ಎರಡು ತಿಂಗಳೇ ಕಳೆದರೂ ಅನ್‌ಬ್ಲಾಕ್ ಆಗದ ಕಾರಣ ಸಾಕಷ್ಟು ನಷ್ಟ ಅನುಭವಿಸಿರುವುದಾಗಿ ಎ.ಡಿ.ಡಿ.ಎಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈ. ಲಿ. ನಿರ್ದೇಶಕ ಗಿರೀಶ್ ಹೇಳಿದ್ದಾರೆ.

ಇ-ಆಡಳಿತದಲ್ಲಿ ಇತರ ರಾಜ್ಯಗಳಿಗಿಂತ ಮುಂದಿದೆ ಎಂಬುದು ಕರ್ನಾಟಕದ ಹೆಗ್ಗಳಿಕೆ. ಆದರೆ ಬ್ಲಾಕ್ ಮಾಡಿದ ಡಿಜಿಟಲ್ ತೆರಿಗೆ ಖಾತೆಯನ್ನು ಅನ್‌ಬ್ಲಾಕ್ ಮಾಡುವುದು ಸ್ವತಃ ಇಲಾಖೆಗೇ ಕಷ್ಟವಾಗಿದೆ. ನ್ಯಾಯಾಧಿಕರಣದ ಆದೇಶದ ಹೊರತಾಗಿಯೂ ಕಳೆದ ಎರಡು ತಿಂಗಳಿನಿಂದ ವ್ಯಾಪಾರ ಸಂಸ್ಥೆಯ ಸರಕು ಮತ್ತು ಸೇವಾ ತೆರಿಗೆ ಗುರುತಿನ ಸಂಖ್ಯೆ (GSTIN) ಅನ್ನು ಮರುಸ್ಥಾಪಿಸಲು ವಾಣಿಜ್ಯ ತೆರಿಗೆ ಇಲಾಖೆಗೆ ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಕಂಪನಿಯ ಮಾಲೀಕರಿಗೆ ಇ-ವೇ ಬಿಲ್ ಸಂಖ್ಯೆಯನ್ನು ಉತ್ಪಾದಿಸಲು ಸಾಧ್ಯವಾಗದೆ, ಗ್ರಾಹಕರು ಈಗಾಗಲೇ ಇರಿಸಿದ ಆರ್ಡರ್‌ಗಳಿಗೆ ತಮ್ಮ ಸರಬರಾಜುಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ.

ADVERTISEMENT

ಎ.ಡಿ.ಡಿ. ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಸಂಸ್ಥೆಯು ರಕ್ಷಣಾ ಉಪಕರಣಗಳನ್ನು ತಯಾರಿಸಿ ಪೂರೈಸುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಈ ಕಂಪನಿಗೆ ಜಿಎಸ್‌ಟಿ ಪಾವತಿಸುವುದು ಸವಾಲಾಗಿ ಪರಿಣಮಿಸಿತ್ತು. ಹೀಗಾಗಿ ಇಲಾಖೆಯು ಜಿಎಸ್‌ಟಿ ವಿಳಂಬ ಪಾವತಿಯನ್ನು ಉಲ್ಲೇಖಿಸಿ, ಅದರ 15-ಅಂಕಿಯ ಜಿಎಸ್‌ಟಿಐಎನ್ ಅನ್ನು ಅಮಾನತುಗೊಳಿಸಿತ್ತು. ಜಿಎಸ್‌ಟಿಐಎನ್ ಇಲ್ಲದೆ ಯಾವುದೇ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಿಲ್ಲ.

ಪರಿಸ್ಥಿತಿ ಸುಧಾರಿಸಿದ ನಂತರ, ಜಿಎಸ್‌ಟಿ ಮೊತ್ತವಾಗಿ 17.5 ಲಕ್ಷ ರೂ.ಗಳನ್ನು 2021 ರ ಮಾರ್ಚ್‌ಗೆ ಬದಲಾಗಿ 2021ರ ಡಿಸೆಂಬರ್‌ನಲ್ಲಿ ಪಾವತಿಸಲಾಗಿತ್ತು. ₹2 ಲಕ್ಷಕ್ಕೂ ಹೆಚ್ಚು ವಿಳಂಬ ಪಾವತಿ ದಂಡ ಶುಲ್ಕವನ್ನೂ ಪಾವತಿಸಿದ್ದು, ನಿಯಮಗಳ ಪ್ರಕಾರ ಜಿಎಸ್‌ಟಿಐಎನ್‌ ಅನ್ನು ಮರು ಚಾಲನೆಗೊಳಿಸಬೇಕಿತ್ತು. ಹಲವಾರು ಮನವಿಗಳ ಹೊರತಾಗಿಯೂ ಅದು ಸಾಧ್ಯವಾಗದಿದ್ದಾಗ, ಅವರು ಸರಕು ಮತ್ತು ಸೇವಾ ತೆರಿಗೆ (ಅಪೀಲುಗಳು)-2 ಬೆಂಗಳೂರು ಜಂಟಿ ಆಯುಕ್ತರ ಮುಂದೆ ಮನವಿ ಸಲ್ಲಿಸಿ, ತಮ್ಮ ರದ್ದುಗೊಂಡ ಜಿಎಸ್‌ಟಿಐಎನ್ ಅನ್ನು ಮರುಸ್ಥಾಪಿಸುವಂತೆ ಗಿರೀಶ್ ಮನವಿ ಮಾಡಿದರು.

ಬ್ಲಾಕ್ ಆಗಿರುವುದರಿಂದಾಗಿ ಡಿಸೆಂಬರ್ 21ರಿಂದ ಫೆಬ್ರವರಿ 2022ರ ವರೆಗಿನ ಜಿಎಸ್‌ಟಿ ರಿಟರ್ನ್ಸ್ ಅನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ. ನೋಂದಣಿ ರದ್ದತಿಯನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಮೇಲ್ಮನವಿ ನ್ಯಾಯಾಧಿಕರಣದ ಮುಂದೆ ಹೋಗುವುದು ಅವರಿಗೆ ಅನಿವಾರ್ಯವಾಯಿತು. ಮಾರ್ಚ್ 31, 2022ರಂದು, ನ್ಯಾಯಾಧಿಕರಣವು ಗಿರೀಶ್‌ ಅವರ ವಾದವನ್ನು ಎತ್ತಿಹಿಡಿದಿದೆ ಮತ್ತು ಜಿಎಸ್‌ಟಿಐಎನ್‌ ಅನ್ನು ಮರುಸ್ಥಾಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿದೆ.

ಆದರೆ ಎರಡು ತಿಂಗಳಾದರೂ ವಾಣಿಜ್ಯ ತೆರಿಗೆ ಇಲಾಖೆಯು ನೋಂದಣಿ ರದ್ದು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿಲ್ಲ. ಇಲಾಖೆಯ ಕಚೇರಿಗೆ ಹಲವಾರು ಬಾರಿ ಮಾಡಿದ ಅಲೆದಾಟ, ದೂರವಾಣಿ ಕರೆಗಳು ವ್ಯರ್ಥವಾಗಿವೆ ಎಂದು ಗಿರೀಶ್‌ ಬೇಸರ ವ್ಯಕ್ತಪಡಿಸಿದ್ದಾರೆ. "ನಾನು ಹಲವಾರು ಗ್ರಾಹಕರಿಗೆ ಉತ್ಪನ್ನಗಳನ್ನು ಪೂರೈಸಬೇಕಾಗಿದೆ. ಜಿಎಸ್‌ಟಿ ಸಂಖ್ಯೆ ಇಲ್ಲದೆ, ಇ-ವೇ ಬಿಲ್ ಹೇಗೆ ತಯಾರಿಸಲು ಸಾಧ್ಯ? ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ನೋಂದಣಿಯನ್ನು ಮರುಸ್ಥಾಪಿಸುವ ವಿಧಾನ ತಿಳಿದಿಲ್ಲ, ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಅಂತಹ ಹಾರಿಕೆಯ ಉತ್ತರವನ್ನು ಒಪ್ಪಿಕೊಳ್ಳುವುದಾದರೂ ಹೇಗೆ? ಇದು ಇ-ಆಡಳಿತದ ಯುಗ. ನ್ಯಾಯಾಧಿಕರಣದ ಆದೇಶದ ಹೊರತಾಗಿಯೂ ಅದನ್ನು ಮರುಸ್ಥಾಪಿಸಲು ಸಾಧ್ಯವಾಗುವುದಿಲ್ಲ ಏಕೆ?" ಎಂದು ಗಿರೀಶ್ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.