ADVERTISEMENT

ಅಕ್ಟೋಬರ್‌ನಿಂದ ಜಿಎಸ್‌ಟಿ ಇ–ಇನ್‌ವಾಯ್ಸ್‌

ವಾರ್ಷಿಕ ವಹಿವಾಟು ಮಿತಿ ₹ 500 ಕೋಟಿಗೆ ನಿಗದಿ

ಪಿಟಿಐ
Published 23 ಜುಲೈ 2020, 13:58 IST
Last Updated 23 ಜುಲೈ 2020, 13:58 IST
ಜಿಎಸ್‌ಟಿ
ಜಿಎಸ್‌ಟಿ   

ನವದೆಹಲಿ: ನಕಲಿ ಇನ್‌ವಾಯ್ಸ್‌ ಸೃಷ್ಟಿಸಿ ಜಿಎಸ್‌ಟಿ ವಂಚಿಸುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇ–ಇನ್‌ವಾಯ್ಸ್‌ ಯೋಜನೆ ರೂಪಿಸಿದ್ದು, ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಈ ಕುರಿತು ಮುಂದಿನ ವಾರ ಪ್ರಕಟಣೆ ಹೊರಬೀಳಲಿದೆ ಎಂದು ಸಿಬಿಐಸಿ ಪ್ರಧಾನ ಆಯುಕ್ತ‌ (ಜಿಎಸ್‌ಟಿ) ಯೋಗೇಂದ್ರ ಗರ್ಗ್‌ ತಿಳಿಸಿದ್ದಾರೆ.

ವಾರ್ಷಿಕ ವಹಿವಾಟು ಮೊತ್ತ ₹ 500 ಕೋಟಿ ಮತ್ತು ಅದಕ್ಕಿಂತ ಹೆಚ್ಚು ಇರುವ ಉದ್ದಿಮೆಗಳು ಮೊದಲಿಗೆ ಈ ಯೋಜನೆಯ ಅಡಿ ಬರಲಿವೆ. ವಾರ್ಷಿಕ ವಹಿವಾಟು ಮಿತಿ ₹ 100 ಕೋಟಿ ಇರುವ ಉದ್ದಿಮೆಗಳು ಏಪ್ರಿಲ್‌ 1ರಿಂದ ಇ–ಇನ್‌ವಾಯ್ಸ್‌ ಪಡೆಯುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ 2019ರ ನವೆಂಬರ್‌ನಲ್ಲಿ ಹೇಳಿತ್ತು. ಆದರೆ 2020ರ ಮಾರ್ಚ್‌ನಲ್ಲಿ ಜಿಎಸ್‌ಟಿ ಮಂಡಳಿಯು ಅದನ್ನು ಅಕ್ಟೋಬರ್ 1ರಿಂದ ಜಾರಿಗೊಳಿಸುವುದಾಗಿ ತಿಳಿಸಿತ್ತು.

ಅಸೋಚಾಂ ಕಾರ್ಯಕ್ರಮದಲ್ಲಿ ಮಾತನಾಡಿದ ಗರ್ಗ್‌ ಅವರು ‘ಅಕ್ಟೋಬರ್‌ 1 ರಿಂದ ಇ–ಇನ್‌ವಾಯ್ಸ್‌ ಜಾರಿಗೆ ತರುವಂತೆ ಜಿಎಸ್‌ಟಿ ಅನುಷ್ಠಾನ ಸಮಿತಿಯು ಶಿಫಾರಸು ಮಾಡಿದೆ. ವಾರ್ಷಿಕ ವಹಿವಾಟು ₹ 100 ಕೋಟಿ ಇರುವವರ ಬದಲಾಗಿ ₹ 500 ಕೋಟಿ ವಹಿವಾಟು ಇರುವ ಉದ್ದಿಮೆಗಳಿಗೆ ಇದನ್ನು ಅನ್ವಯಿಸುವ ಸಂಬಂಧ ಶೀಘ್ರವೇ ಪ್ರಕಟಣೆ ಹೊರಡಿಸಲಾಗುವುದು. ಮುಂದಿನ ಹಂತದಲ್ಲಿ, ₹ 100 ಕೋಟಿ ಮೊತ್ತದ ವಹಿವಾಟು ನಡೆಸುವವರಿಗೆ ಅದನ್ನು ಜಾರಿಗೊಳಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಉದ್ಯಮಿಗಳ ಮಧ್ಯೆ ನಡೆಯುವ ವಹಿವಾಟನ್ನು (ಬಿ2ಬಿ) ಜಿಎಸ್‌ಟಿ ನೆಟ್‌ವರ್ಕ್‌ನಲ್ಲಿ ಇ–ಇನ್‌ವಾಯ್ಸ್‌ ಮೂಲಕ ದೃಢೀಕರಿಸಲಾಗುವುದು. ಕೈಯಿಂದ ವಿವರಗಳನ್ನು (ಮ್ಯಾನುವಲ್‌) ಭರ್ತಿ ಮಾಡುವಾಗ ಅಂಕಿ ಅಂಶಗಳು ತಪ್ಪಾಗಿ ದಾಖಲಾಗುವ ಸಾಧ್ಯತೆ ಇರುತ್ತದೆ. ಇದನ್ನು ಸಂಪೂರ್ಣವಾಗಿ ತೊಡೆದು ಹಾಕುವ ಉದ್ದೇಶಕ್ಕೆ ತೆರಿಗೆದಾರರು ನಡೆಸುವ ವಹಿವಾಟಿನ ಪ್ರಕ್ರಿಯೆಯನ್ನು ಡಿಜಿಟಲೀಕರಣಕ್ಕೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.