ADVERTISEMENT

ಜಿಎಸ್‌ಟಿ: ವರಮಾನ ಸಂಗ್ರಹ ಹೆಚ್ಚಳಕ್ಕೆ ಸಮಿತಿ ರಚನೆ

ಪಿಟಿಐ
Published 11 ಅಕ್ಟೋಬರ್ 2019, 18:06 IST
Last Updated 11 ಅಕ್ಟೋಬರ್ 2019, 18:06 IST
   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಲು ಕೇಂದ್ರ ಸರ್ಕಾರವು ಸಮಿತಿಯೊಂದನ್ನು ರಚಿಸಿದೆ.

ಸೆಪ್ಟೆಂಬರ್‌ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು 19 ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹ ಹೆಚ್ಚಳ, ತೆರಿಗೆ ವ್ಯಾಪ್ತಿ ವಿಸ್ತರಣೆ ಮತ್ತು ತೆರಿಗೆ ತಪ್ಪಿಸುವುದಕ್ಕೆ ಕಡಿವಾಣ ಹಾಕುವ ಕ್ರಮಗಳ ಕುರಿತು ಸಲಹೆ ನೀಡಲು ಸಮಿತಿ ರಚಿಸಲಾಗಿದೆ.

ತೆರಿಗೆ ವರಮಾನ ಕುಸಿತಕ್ಕೆ ತಕ್ಷಣ ಕಡಿವಾಣ ಹಾಕಲು ಮತ್ತು ತೆರಿಗೆ ಸಂಗ್ರಹ ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಶಿಫಾರಸು ಮಾಡಲು ರಾಜ್ಯ ಮಟ್ಟದ ತೆರಿಗೆ ಕಮಿಷನರುಗಳು ಮತ್ತು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿಗೆ ಕೇಳಿಕೊಳ್ಳಲಾಗಿದೆ.

ADVERTISEMENT

ಸಮಿತಿಯು ವ್ಯಾಪಕ ಪ್ರಮಾಣದಲ್ಲಿ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವುದನ್ನು ಪರಿಗಣಿಸಲಿದೆ. ಹೀಗಾಗಿ ಸಮಗ್ರ ಸ್ವರೂಪದ ಸಲಹೆಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೆರಿಗೆ ವ್ಯವಸ್ಥೆಯ ದುರ್ಬಳಕೆ ತಡೆಗಟ್ಟಲು ಜಾರಿಗೆ ತರಬೇಕಾದ ವ್ಯವಸ್ಥಿತ ಬದಲಾವಣೆಗಳ ಬಗ್ಗೆ ಗಮನ ಹರಿಸಲು ಸಮಿತಿಗೆ ಸೂಚಿಸಲಾಗಿದೆ. ಜಿಎಸ್‌ಟಿ ಕಾಯ್ದೆಯಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆಯೂ ಸಮಿತಿ ಶಿಫಾರಸು ಮಾಡಬಹುದಾಗಿದೆ. ತೆರಿಗೆ ವ್ಯಾಪ್ತಿ ವಿಸ್ತರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಮಿತಿಗೆ ಸೂಚಿಸಲಾಗಿದೆ.

ಸೆಪ್ಟೆಂಬರ್‌ ತಿಂಗಳಲ್ಲಿ ₹ 91,916 ಕೋಟಿ ಜಿಎಸ್‌ಟಿ ಸಂಗ್ರಹವು 19 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ. ಬೇಡಿಕೆ ಕುಸಿತದಿಂದ ಆರ್ಥಿಕೆಯಲ್ಲಿ ಹಿಂಜರಿತವು ವ್ಯಾಪಕವಾಗುತ್ತಿರುವುದನ್ನು ಇದು ಸೂಚಿಸುತ್ತದೆ. ಸತತ ಎರಡನೆ ತಿಂಗಳಿನಲ್ಲಿಯೂ ಜಿಎಸ್‌ಟಿ ಸಂಗ್ರಹ ಕಡಿಮೆಯಾಗಿದೆ. ತೆರಿಗೆ ಸಂಗ್ರಹದಲ್ಲಿನ ಕುಸಿತವು ಮಂದಗತಿಯ ಆರ್ಥಿಕ ಚಟುವಟಿಕೆಗಳನ್ನು ಪ್ರತಿಫಲಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.