ADVERTISEMENT

ನಕಲಿ ಕಂಪನಿ ಸೃಷ್ಟಿಸಿ ₹ 50 ಕೋಟಿ ಐಟಿಸಿ ವಂಚನೆ: ಓರ್ವನ ಬಂಧನ

ಪಿಟಿಐ
Published 28 ಫೆಬ್ರುವರಿ 2021, 14:46 IST
Last Updated 28 ಫೆಬ್ರುವರಿ 2021, 14:46 IST
   

ನವದೆಹಲಿ: ನಕಲಿ ಕಂಪನಿಗಳನ್ನು ಸೃಷ್ಟಿಸಿ ಆ ಮೂಲಕ ₹ 50 ಕೋಟಿ ಮೊತ್ತದ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ವಂಚಿಸಿರುವ ವ್ಯಕ್ತಿಯೊಬ್ಬನನ್ನು ಜಿಎಸ್‌ಟಿ ಅಧಿಕಾರಿಗಳು ಬಂಧಿಸಿರುವುದಾಗಿ ಹಣಕಾಸು ಸಚಿವಾಲಯ ಭಾನುವಾರ ಹೇಳಿದೆ.

ವೃತ್ತಿಯಲ್ಲಿ ವಕೀಲರಾಗಿರುವ ವಿಶಾಲ್ ಎನ್ನುವವರು ತಮ್ಮದೇ ಹೆಸರಿನಲ್ಲಿ ನಕಲಿ ಕಂಪನಿಯನ್ನು ನಡೆಸುತ್ತಿದ್ದು, ತಮ್ಮ ನಿವಾಸದ ವಿಳಾಸವನ್ನೇ ನೀಡಿ ನೋಂದಣಿ ಮಾಡಿಸಿಕೊಂಡಿದ್ದರು. ಅಲ್ಲದೆ, ಹಲವು ವ್ಯಕ್ತಿಗಳ ಕೆವೈಸಿ ಬಳಸಿಕೊಂಡು ಅನೇಕ ನಕಲಿ ಸಂಸ್ಥೆಗಳನ್ನು ರಚಿಸಿದ್ದರು. ಯಾವುದೇ ವಹಿವಾಟು ನಡೆಸುತ್ತಿರಲಿಲ್ಲ ಮತ್ತು ನಕಲಿ ಐಟಿಸಿ ರೂಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದಾಗ, ಹಲವು ವ್ಯಕ್ತಿಗಳ ಹೆಸರಿನ ಕೆವೈಸಿ ಮತ್ತು ಚೆಕ್‌ಗಳು ದೊರೆತಿವೆ. ಇನ್‌ವಾಯ್ಸ್‌ ಮೊತ್ತದ ಶೇ 2ರಷ್ಟು ಕಮಿಷನ್‌ ಪಡೆಯುವ ಮೂಲಕ ನಕಲಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ರೂಪಿಸಿ ತಮ್ಮ ಗ್ರಾಹಕರಿಗೆ ನೀಡುತ್ತಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ದೆಹಲಿ ಪೂರ್ವ ವಿಭಾಗದ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಆಯುಕ್ತರ ಕಚೇರಿಯ ಅಧಿಕಾರಿಗಳು ಈ ವಂಚನೆ ಪ್ರಕರಣವನ್ನು ಭೇದಿಸಿದ್ದಾರೆ ಎಂದು ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶಾಲ್‌ ಅವರನ್ನು ಮಾರ್ಚ್‌ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಇಲ್ಲಿಯವರೆಗೆ ದೆಹಲಿ ವಲಯವು ₹ 4,019 ಕೋಟಿಗೂ ಅಧಿಕ ಮೊತ್ತದ ವಿವಿಧ ಪ್ರಕರಣಗಳಲ್ಲಿ 27 ಜನರನ್ನು ಬಂಧಿಸಿದೆ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.