ADVERTISEMENT

ಜಿಎಸ್‌ಟಿ ಬದಲಾವಣೆ: ಆನ್‌ಲೈನ್‌ ವೇದಿಕೆಗಳಲ್ಲಿ ಕೊಳ್ಳುವವರಿಂದ ಖರೀದಿ ಮುಂದಕ್ಕೆ

ಪಿಟಿಐ
Published 31 ಆಗಸ್ಟ್ 2025, 15:58 IST
Last Updated 31 ಆಗಸ್ಟ್ 2025, 15:58 IST
   

ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ತೆರಿಗೆ ಹಂತಗಳಲ್ಲಿ ಬದಲಾವಣೆ ತರುವ ಪ್ರಸ್ತಾವ ಇರುವ ಕಾರಣಕ್ಕೆ, ಆನ್‌ಲೈನ್‌ ವೇದಿಕೆಗಳ ಮೂಲಕ ಖರೀದಿಸುವ ಪ್ರವೃತ್ತಿ ಇರುವ ಹಲವರು ಖರೀದಿಯನ್ನು ಮುಂದೂಡುತ್ತಿದ್ದಾರೆ.

ತೆರಿಗೆ ಪ್ರಮಾಣ ಇಳಿಕೆ ಆಗಿ, ಗ್ರಾಹಕ ಬಳಕೆ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಬೆಲೆಯು ಕಡಿಮೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಅವರು ಈ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಖರೀದಿಯನ್ನು ಮುಂದಕ್ಕೆ ಹಾಕುತ್ತಿರುವುದು ಅಲ್ಪಕಾಲಕ್ಕೆ ಮಾತ್ರ ಸೀಮಿತ, ಜಿಎಸ್‌ಟಿ ಬದಲಾವಣೆಗಳ ವಿಚಾರದಲ್ಲಿ ಸ್ಪಷ್ಟತೆ ಮೂಡಿದ ನಂತರದಲ್ಲಿ ಖರೀದಿಯು ಚುರುಕುಗೊಳ್ಳಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

ADVERTISEMENT

ಜಿಎಸ್‌ಟಿ ಅಡಿಯಲ್ಲಿ ನಾಲ್ಕು ಹಂತಗಳ ತೆರಿಗೆಯ ಬದಲಿಗೆ ಎರಡು ಹಂತಗಳ ತೆರಿಗೆ ಪದ್ಧತಿಯನ್ನು ಜಾರಿಗೆ ತರುವ ಪ್ರಸ್ತಾವವನ್ನು ಕೇಂದ್ರ ಸರ್ಕಾರವು ಸಿದ್ಧಪಡಿಸಿದೆ. ಕೇಂದ್ರದ ಪ್ರಸ್ತಾವ ಜಾರಿಗೆ ಬಂದಲ್ಲಿ ವಾಷಿಂಗ್ ಮೆಷಿನ್, ಹವಾನಿಯಂತ್ರಕಗಳು, ರೆಫ್ರಿಜರೇಟರ್‌ಗಳಂತಹ ಉಪಕರಣಗಳ ಮೇಲಿನ ತೆರಿಗೆ ತಗ್ಗುವ ನಿರೀಕ್ಷೆ ಇದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯ ಜಿಎಸ್‌ಟಿ ಮಂಡಳಿಯು ಸೆಪ್ಟೆಂಬರ್ 3 ಹಾಗೂ 4ರಂದು ಸಭೆ ಸೇರಲಿದೆ.

‘ತೆರಿಗೆ ಹಂತಗಳಲ್ಲಿ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆಯ ಕಾರಣದಿಂದಾಗಿ ಗ್ರಾಹಕರು ಕಾದುನೋಡುವ ತಂತ್ರದ ಮೊರೆಹೋಗಿದ್ದಾರೆ. ಜಿಎಸ್‌ಟಿ ವಿಚಾರದಲ್ಲಿ ಸ್ಪಷ್ಟತೆ ಸಿಗುವುದು ವಿಳಂಬ ಆದಲ್ಲಿ, ಹವಾನಿಯಂತ್ರಕ, ರೆಫ್ರಿಜರೇಟರ್‌ಗಳ ಮಾರಾಟದ ಮೇಲೆ ಶೇ 30ರವರೆಗೆ ಪರಿಣಾಮ ಉಂಟಾಗಬಹುದು ಎಂಬುದನ್ನು ಆಂತರಿಕ ಅಂದಾಜುಗಳು ಹೇಳುತ್ತಿವೆ’ ಎಂದು ಗ್ರ್ಯಾಂಟ್‌ ಥಾರ್ನ್‌ಟನ್‌ ಭಾರತ್ ಸಂಸ್ಥೆಯ ಪಾಲುದಾರ ನವೀನ್ ಮಲ್ಪಾನಿ ಹೇಳಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ತೆರಿಗೆ ದರ ಇಳಿಕೆಯಾಗಿ, ಉತ್ಪನ್ನಗಳ ಬೆಲೆಯೂ ಕಡಿಮೆ ಆಗಬಹುದು ಎಂದು ಗ್ರಾಹಕರು ಅಂದಾಜು ಮಾಡಿದ್ದಾರೆ. ₹1.2 ಲಕ್ಷ ಮೌಲ್ಯದ ಸ್ಮಾರ್ಟ್‌ಫೋನ್‌ ಬೆಲೆಯು ಶೇ 10ರಷ್ಟು ಕಡಿಮೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಗ್ರಾಹಕರು ಖರೀದಿಯನ್ನು ಮುಂದೂಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಜಿಎಸ್‌ಟಿ ಅಡಿ ಹೊಸ ದರಗಳನ್ನು ಅಂತಿಮಗೊಳಿಸಿದ ನಂತರದಲ್ಲಿ, ಅಕ್ಟೋಬರ್‌ ಕೊನೆಯ ಭಾಗದಲ್ಲಿ ಬೇಡಿಕೆ ಹೆಚ್ಚಳ ಆಗಬಹುದು ಎಂದು ಇ–ಕಾಮರ್ಸ್‌ ವಹಿವಾಟಿನಲ್ಲಿರುವ ಪ್ರಮುಖ ಕಂಪನಿಗಳು ಉತ್ಪಾದಕರಿಗೆ ತಿಳಿಸುತ್ತಿವೆ ಎಂದು ಕೌಂಟರ್‌ಪಾಯಿಂಟ್‌ ರಿಸರ್ಚ್‌ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಶುಭಂ ನಿಮ್ಕಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.