ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಳಿಕೆಯು ಜಾರಿಗೆ ಬಂದ ನಂತರದಲ್ಲಿ, ಉತ್ಪನ್ನಗಳ ಬೆಲೆಯನ್ನು ತಗ್ಗಿಸದೆ ಇರುವುದಕ್ಕೆ ಸಂಬಂಧಿಸಿದ ದೂರುಗಳನ್ನು ಉದ್ಯಮ ವಲಯದ ಗಮನಕ್ಕೆ ತರಲಾಗುತ್ತದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಹಾಗೂ ಸುಂಕಗಳ ಮಂಡಳಿಯ (ಸಿಬಿಐಸಿ) ಮುಖ್ಯಸ್ಥ ಸಂಜಯ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ.
ವಿವಿಧ ಉತ್ಪನ್ನಗಳು, ಸೇವೆಗಳ ಮೇಲಿನ ತೆರಿಗೆಯನ್ನು ತಗ್ಗಿಸುವ ತೀರ್ಮಾನವನ್ನು ಜಿಎಸ್‌ಟಿ ಮಂಡಳಿಯು ಕಳೆದ ವಾರ ತೆಗೆದುಕೊಂಡಿದೆ. ಪರಿಷ್ಕೃತ ತೆರಿಗೆ ದರವು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ.
ನಿತ್ಯದ ಬಳಕೆಯ ಬಹುತೇಕ ಉತ್ಪನ್ನಗಳ ಮೇಲೆ ಶೇಕಡ 5ರಷ್ಟು ತೆರಿಗೆ ಇರಲಿದೆ. ಇನ್ನುಳಿದ ಉತ್ಪನ್ನಗಳು, ಸೇವೆಗಳ ಮೇಲೆ ಶೇ 18ರಷ್ಟು ತೆರಿಗೆ ಇರಲಿದೆ. ವೈಯಕ್ತಿಕ ಆರೋಗ್ಯ ವಿಮೆ, ಜೀವ ವಿಮೆಯ ಮೇಲೆ ಶೂನ್ಯ ತೆರಿಗೆ ಇರಲಿದೆ.
ತೆರಿಗೆ ತಗ್ಗಿಸುವ ತೀರ್ಮಾನವನ್ನು ಜಿಎಸ್‌ಟಿ ಮಂಡಳಿಯು ಈ ಹಿಂದೆ ತೆಗೆದುಕೊಂಡಾಗ, ಉದ್ಯಮಗಳು ತೆರಿಗೆ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿವೆ. ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ಶಕ್ತಿಗಳು ತೆರಿಗೆ ಇಳಿಕೆಯ ಪ್ರಯೋಜನವು ಗ್ರಾಹಕರಿಗೆ ಸಿಗುವಂತೆ ಮಾಡುತ್ತವೆ ಎಂದು ಅಗರ್ವಾಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ತೆರಿಗೆ ಇಳಿಕೆಯ ಪ್ರಯೋಜನವನ್ನು ಉದ್ಯಮಗಳು ಗ್ರಾಹಕರಿಗೆ ವರ್ಗಾಯಿಸುತ್ತವೆ ಎಂಬ ವಿಶ್ವಾಸ ನಮ್ಮದು. ನಮಗೆ ಏನಾದರೂ ದೂರುಗಳು ಬಂದಲ್ಲಿ, ಅದನ್ನು ನಾವು ಉದ್ಯಮದ ಪ್ರಾತಿನಿಧಿಕ ಸಂಸ್ಥೆಗಳ ಜೊತೆ ಚರ್ಚಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಜಿಎಸ್‌ಟಿ ಜಾರಿಗೆ ಬಂದ ಆರಂಭಿಕ ವರ್ಷಗಳ ಅನುಭವವನ್ನು ಹಂಚಿಕೊಂಡ ಅಗರ್ವಾಲ್ ಅವರು, ‘ಲಾಭಕೋರತನದ ಬಗ್ಗೆ ದೂರು ಸಲ್ಲಿಸಲು ವ್ಯವಸ್ಥೆ ರೂಪಿಸಿದ್ದರೂ, 2017, 2018 ಮತ್ತು 2019ರಲ್ಲಿ ತೆರಿಗೆ ಇಳಿಕೆ ಮಾಡಿದ್ದಾಗ ಹೆಚ್ಚಿನ ದೂರುಗಳು ಬಂದಿರಲಿಲ್ಲ’ ಎಂದಿದ್ದಾರೆ.
‘ದರ ಇಳಿಕೆಯ ಪ್ರಯೋಜನವನ್ನು ಉದ್ದಿಮೆಗಳು ಗ್ರಾಹಕರಿಗೆ ಬಹುತೇಕ ವರ್ಗಾವಣೆ ಮಾಡಿದ್ದವು ಎಂಬ ಭಾವನೆಯನ್ನು ಇದು ನಮ್ಮಲ್ಲಿ ಮೂಡಿಸಿದೆ. ಹೀಗಾಗಿ ಈ ಬಾರಿಯೂ ಪರಿಸ್ಥಿತಿ ಭಿನ್ನವಾಗಿರುತ್ತದೆ ಎಂದು ನಾವು ನಿರೀಕ್ಷಿಸಿಲ್ಲ’ ಎಂದು ಅಗರ್ವಾಲ್ ಹೇಳಿದ್ದಾರೆ.
ಜಿಎಸ್‌ಟಿ ದರ ಇಳಿಕೆಯ ಪ್ರಯೋಜನವನ್ನು ವರ್ತಕರು ಹಾಗೂ ಉದ್ದಿಮೆಗಳು ಗ್ರಾಹಕರಿಗೆ ವರ್ಗಾವಣೆ ಮಾಡಬೇಕು ಎಂಬುದಾಗಿ ಜಿಎಸ್‌ಟಿ ಕಾನೂನು ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.