ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಿಂದಾಗಿ ಜನರು ಪಾವತಿಸುವ ತೆರಿಗೆ ದರದಲ್ಲಿ ಇಳಿಕೆಯಾಗಿದೆ. ತೆರಿಗೆ ಪಾವತಿದಾರರ ಸಂಖ್ಯೆಯೂ 1.24 ಕೋಟಿಗೆ ದುಪ್ಪಟ್ಟಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಮೊದಲ ಪುಣ್ಯತಿಥಿಯ ಅಂಗವಾಗಿ ಸಚಿವಾಲಯವು ಸರಣಿ ಟ್ವೀಟ್‌ಗಳನ್ನು ಮಾಡಿದೆ.
2014ರಲ್ಲಿ ಮೋದಿ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು, ಜಿಎಸ್‌ಟಿ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜಿಎಸ್‌ಟಿ ಜಾರಿಗೊಳಿಸಿದ್ದುಭಾರತದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಯಾಗಿದೆ ಎಂದು ಟ್ವೀಟ್ ಮಾಡಿದೆ.
ಜಿಎಸ್‌ಟಿಗೂ ಮೊದಲು ಮೌಲ್ಯವರ್ಧಿತ ತೆರಿಗೆ (ಜಿಎಸ್‌ಟಿ), ಎಕ್ಸೈಸ್, ಮಾರಾಟ ತೆರಿಗೆ... ಹೀಗೆ ತೆರಿಗೆ ದರ ಗರಿಷ್ಠ ಶೇ 31ರವರೆಗೂ ಇತ್ತು. ಜಿಎಸ್‌ಟಿಯಲ್ಲಿ ಐಷಾರಾಮಿ ಸರಕುಗಳಿಗೆ ಮಾತ್ರವೇ ಶೇ 28ರ ಗರಿಷ್ಠ ತೆರಿಗೆ ದರ ಇದೆ.
ಜಿಎಸ್‌ಟಿಯು ಗ್ರಾಹಕರು ಮತ್ತು ತೆರಿಗೆದಾರ ಸ್ನೇಹಿ ವ್ಯವಸ್ಥೆಯಾಗಿದೆ. ಜಿಎಸ್‌ಟಿಯಲ್ಲಿ ತೆರಿಗೆ ದರ ಇಳಿಕೆ ಆಗಿರುವುದರಿಂದ ತೆರಿಗೆ ವ್ಯಾಪ್ತಿಗೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಜಿಎಸ್‌ಟಿ ಜಾರಿಗೊಳಿಸಿದ ಸಂದರ್ಭದಲ್ಲಿ ತೆರಿಗೆದಾರರ ಸಂಖ್ಯೆ 65 ಲಕ್ಷ ಇತ್ತು. ಸದ್ಯ 1.24 ಕೋಟಿ ತೆರಿಗೆದಾರರಿದ್ದಾರೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.