ADVERTISEMENT

ಜಿಎಸ್‌ಟಿಆರ್‌ 9 ವಿಳಂಬ ಬೇಡ

ಅರ್ಚಿತ್ ಗುಪ್ತಾ
Published 25 ಜೂನ್ 2019, 19:30 IST
Last Updated 25 ಜೂನ್ 2019, 19:30 IST
   

ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ಜಾರಿಗೆ ಬಂದು ಎರಡು ವರ್ಷಗಳು ಕಳೆದಿವೆ. ಶೀಘ್ರದಲ್ಲಿಯೇ ಮೂರನೆ ವರ್ಷಕ್ಕೆ ಕಾಲಿಡುತ್ತಿದ್ದೇವೆ. 2017-2018ರ ಹಣಕಾಸು ವರ್ಷದಲ್ಲಿ ಮೊದಲ ಬಾರಿಗೆ ಈ ಹೊಸ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಲಾಯಿತು. ಇದನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವಲ್ಲಿ ಉದ್ದಿಮೆ ವಹಿವಾಟು ಸಂಸ್ಥೆಗಳು ಈಗಲೂ ಕೆಲವು ಸವಾಲುಗಳನ್ನು ಎದುರಿಸುತ್ತಿವೆ. 2017-18ರ ಹಣಕಾಸು ವರ್ಷದ ವಾರ್ಷಿಕ ರಿಟರ್ನ್ಸ್ ಅನ್ನು ‘ಜಿಎಸ್‌ಟಿಆರ್‌-9’ ಎಂದು ಕರೆಯುತ್ತಾರೆ. ಇದು ಕ್ಲಿಷ್ಟಕರ ಸ್ವರೂಪದಲ್ಲಿದೆ. ಈ ಕಗ್ಗಂಟನ್ನು ಬಿಡಿಸಲು ವ್ಯಾಪಕ ಸಮನ್ವಯದ (reconciliation) ಅವಶ್ಯಕತೆ ಇದೆ. 2017–18ನೆ ಸಾಲಿನ ವಾರ್ಷಿಕ ರಿಟರ್ನ್ಸ್ ಸಲ್ಲಿಕೆಗೆ ಜೂನ್‌ ತಿಂಗಳ 30 ಕೊನೆಯ ದಿನವಾಗಿತ್ತು. ಕಳೆದ ವಾರದ ನಡೆದ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಎರಡು ತಿಂಗಳವರೆಗೆ (ಆಗಸ್ಟ್‌ 30) ಗಡುವು ವಿಸ್ತರಿಸಲಾಗಿದೆ.

ಜಿಎಸ್‌ಟಿಆರ್-9 ಎಂಬುದು ವಾರ್ಷಿಕ ರಿಟರ್ನ್ಸ್ ಆಗಿದೆ. ಜಿಎಸ್‌ಟಿ ಅಡಿಯಲ್ಲಿ ನೋಂದಣಿಯಾದ ಎಲ್ಲ ವಹಿವಾಟುದಾರರು ಈ ವಾರ್ಷಿಕ ರಿಟರ್ನ್ ಫೈಲ್ ಮಾಡಲೇ ಬೇಕು. ಜಿಎಸ್‌ಟಿ ತೆರಿಗೆ ಪಾವತಿದಾರರು ಜಿಎಸ್‌ಟಿಆರ್-9 ಸಲ್ಲಿಸುವುದು ಅವಶ್ಯಕ. ರಾಜಿ ತೆರಿಗೆ ಯೋಜನೆ (ಕಂಪೋಸಿಷನ್ ಸ್ಕೀಮ್) ಅಡಿಯಲ್ಲಿ ತೆರಿಗೆ ಪಾವತಿ ಮಾಡುವವರು ಹಾಗೂ ಇ-ಕಾಮರ್ಸ್ ಸಂಸ್ಥೆಗಳಿಗೆ ಪ್ರತ್ಯೇಕ ಅರ್ಜಿ ನಮೂನೆ ಇದೆ.

ಜಿಎಸ್‌ಟಿ ಪಾವತಿಸುವವರ ವಾರ್ಷಿಕ ವಹಿವಾಟು ₹ 2 ಕೋಟಿಗಿಂತ ಹೆಚ್ಚಿಗೆ ಇದ್ದರೆ ಅಂತವರು ‘ಜಿಎಸ್‌ಟಿಆರ್-9’ ಜತೆಗೆ ‘ಜಿಎಸ್‌ಟಿಆರ್-9ಸಿ’ ಕೂಡ ಫೈಲ್ ಮಾಡಬೇಕು. ಜಿಎಸ್‌ಟಿ ಸಮನ್ವಯದ ಸ್ವರೂಪವೇ ಜಿಎಸ್‌ಟಿಆರ್-9ಸಿ. ವಹಿವಾಟಿನ ಪ್ರತಿಯೊಂದು ಜಿಎಸ್‌ಟಿಐಎನ್‌ಗೆ ಸಂಸ್ಥೆಯು ಪ್ರತ್ಯೇಕವಾಗಿ ಜಿಎಸ್‌ಟಿಆರ್-9 ಸಲ್ಲಿಸುವುದು ಅಗತ್ಯವಾಗಿದೆ. ಜಿಎಸ್‌ಟಿಆರ್-9 ನ ಮುಖ್ಯ ಆಧಾರವು ವಾರ್ಷಿಕ ರಿಟರ್ನ್ಸ್‌ಗಳಾದ, ಜಿಎಸ್‌ಟಿಆರ್-1 ಮತ್ತು ಜಿಎಸ್‌ಟಿಆರ್-3ಬಿ. ತಮ್ಮ ಸರಕು ಮತ್ತು ಸೇವೆ ಪೂರೈಕೆಯನ್ನು ದಾಖಲಿಸಲು ಸಂಸ್ಥೆಗಳು ಜಿಎಸ್‌ಟಿಆರ್-1 ಅನ್ನು ಫೈಲ್ ಮಾಡಬೇಕು. ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಜಿಎಸ್‌ಟಿಆರ್-3ಬಿ ಬಳಕೆ ಮಾಡಬೇಕು.

ADVERTISEMENT

ಮೇಲಿನ ಈ ಎರಡೂ ರಿಟರ್ನ್ಸ್‌ಗಳ ಸಂಯೋಜನೆಯೇ ಜಿಎಸ್‌ಟಿಆರ್-9 ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದರೆ, ಇದು ನಾವು ಅಂದುಕೊಂಡಿರುವಷ್ಟು ಸರಳವಲ್ಲ. ತೆರಿಗೆ ಪಾವತಿದಾರರು ಸಮಗ್ರ ಮತ್ತು ವ್ಯಾಪಕ ಸ್ವರೂಪದಲ್ಲಿ ಸಮನ್ವಯ ಮಾಡುವ ಅಗತ್ಯ ಇದೆ.

ಸಂಸ್ಥೆಗಳು ರಿಟರ್ನ್ಸ್ ಫೈಲ್ ಮಾಡಿದಾಗ ದಾಖಲಿಸಿಸದ ಸರಬರಾಜು, ತೆರಿಗೆ ಪಾವತಿ ಹಾಗೂ ಇವರ ಮಾರಾಟಗಾರರು ಮತ್ತು ಲೆಕ್ಕಪತ್ರದಲ್ಲಿನ ವಿವರಗಳಿಗೆ ಹೋಲಿಕೆ ಮಾಡಬೇಕು.

ಜಿಎಸ್‌ಟಿಆರ್‌-9 ನಲ್ಲಿ ಕೇಳುವ ಮಾಹಿತಿಗಳು ವಿವಿಧ ಬಗೆಗಳಾಗಿರುತ್ತವೆ. ಕೆಲವೊಂದು ಮಾಹಿತಿಗಳು ರಿಟರ್ನ್ಸ್ ಫೈಲ್ ಮಾಡಿದಾಗ ಸ್ವಯಂಚಾಲಿತವಾಗಿ ಭರ್ತಿ ಆಗುತ್ತವೆ. ಇನ್ನೂ ಕೆಲವು ಮಾಹಿತಿಯನ್ನು ತೆರೆಗೆ ಪಾವತಿದಾರ ಖುದ್ದಾಗಿ ಭರ್ತಿ ಮಾಡಬೇಕಾಗುತ್ತದೆ.

ಮಾರಾಟಗಾರ ತೆರಿಗೆ ಪಾವತಿಸುವ ಬದಲಿಗೆ ಖರೀದಿದಾರರನೇ ಸರ್ಕಾರಕ್ಕೆ ಜಿಎಸ್‌ಟಿ ಪಾವತಿಸುವ ಆರ್‌ಸಿಎಂ (Reverse Charge Mechanism-RCM) ವ್ಯವಸ್ಥೆ ಅನುಸರಿಸಿದ್ದರೆ ತೆರಿಗೆಯನ್ನು ಪಾವತಿ ಮುಂದಿನ ಹಣಕಾಸು ವರ್ಷದ ಜಿಎಸ್‌ಟಿಆರ್‌-3ಬಿ ಸಲ್ಲಿಕೆ ವೇಳೆ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು.

ಉದಾಹರಣೆಗೆ ಕೆಲ ತೆರಿಗೆದಾರರು ಜಿಎಸ್‌ಟಿಆರ್‌-3ಬಿ ಮೂಲಕ ಹಣಕಾಸು ವರ್ಷ 2018-19 ರ ಆರ್‌ಸಿಎಂ ತೆರಿಗೆ ಪಾವತಿ ಮಾಡಿದ್ದರೆ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಹಣಕಾಸು ವರ್ಷ 2017-18 ರಲ್ಲಿ ಸರಕುಗಳನ್ನು ಸ್ವೀಕರಿಸಲಾಗಿದೆ ಎಂದು ಭಾವಿಸಿ. ಈ ತೆರಿಗೆ ಮಾಹಿತಿಯನ್ನು ಭರ್ತಿ ಮಾಡಿದ ಸಂದರ್ಭದಲ್ಲಿ ಜಿಎಸ್‌ಟಿಆರ್‌-9 ರಲ್ಲಿ ಅಧಿಕ ವಹಿವಾಟು ದಾಖಲಾಗುತ್ತದೆ ಮತ್ತು ಪಾವತಿಯಲ್ಲಿ ಅಂತರ ತೋರಿಸುತ್ತದೆ.

ಜಿಎಸ್‌ಟಿಆರ್‌-1 ಅರ್ಜಿ ಬಳಸಿ ತೆರಿಗೆದಾರರು ಪೂರೈಕೆಯಲ್ಲಿನ ಹೆಚ್ಚಳ ಹಾಗೂ ಸರಬರಾಜಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಬಹದು. ಆದರೆ ಜಿಎಸ್‌ಟಿಆರ್‌-3ಬಿ ಮೂಲಕ ಸರಿಯಾದ ತೆರಿಗೆ ಪಾವತಿಯನ್ನು ವಾರ್ಷಿಕ ರಿಟರ್ನ್ಸ್ ನಲ್ಲಿ ತೋರಿಸಲಾಗುವುದು. ಜಿಎಸ್‌ಟಿಆರ್‌-9 ನ ಟೇಬಲ್ ನಂಬರ್ 10 ಹಾಗೂ ಟೇಬಲ್ ನಂಬರ್ 11 ಅನ್ನು ತಿದ್ದುಪಡಿ ದಾಖಲು ಮಾಡಲು ಬಳಸಬೇಕು. ಇದು ಜಿಎಸ್‌ಟಿಆರ್‌-1 ಆಧಾರಿತವಾಗಿರಬೇಕು.

ಜಿಎಸ್‌ಟಿಆರ್‌-3ಬಿ ಅನ್ವಯ ಮಾಡಿದ ತೆರಿಗೆ ಪಾವತಿ ಮಾಹಿತಿಯನ್ನು ಟೇಬಲ್ ಸಂಖ್ಯೆ 9 ಒಳಗೊಂಡಿರುತ್ತದೆ. ವಾರ್ಷಿಕ ರಿಟರ್ನ್ಸ್‌ನಲ್ಲಿ ಹೇಗೆತಿದ್ದುಪಡಿ ಮಾಡಬೇಕು ಎನ್ನುವುದು ಇದರಿಂದ ಗೊಂದಲಕ್ಕೆ ಎಡೆಮಾಡಿಕೊಡುತ್ತದೆ. ಇದರಿಂದ ಮಾಹಿತಿಗಳು ಹೊಂದಾಣಿಕೆಯಾವುದಿಲ್ಲ.

ಸಣ್ಣ ಉದ್ದಿಮೆದಾರರು ಅಂತರ್ಜಾಲದ ಮೂಲಕ ತೆರಿಗೆ ಪಾವತಿ ಮಾಡಿರುತ್ತಾರೆ. ಆದರೆ, ಜಿಎಸ್‌ಟಿಆರ್‌-3ಬಿ ಯನ್ನು ತಪ್ಪಾಗಿ ಫೈಲ್ ಮಾಡಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ಸಂಪನ್ಮೂಲ ಹಾಗೂ ಸಮಯದ ಕೊರತೆ. ಇದರಿಂದಾಗಿ ತೆರಿಗೆ ಪಾವತಿ ಮಾಡಿದ್ದರೂ ಸಹ ಜಿಎಸ್‌ಟಿಆರ್‌-9 ನಲ್ಲಿ ತಪ್ಪು ಅಂಕಿಅಂಶಗಳು ದಾಖಲಾಗಿರುತ್ತವೆ.

ಜಿಎಸ್‌ಟಿಆರ್‌-1, ಜಿಎಸ್‌ಟಿಆರ್‌-2ಎ ಹಾಗೂ ಜಿಎಸ್‌ಟಿಆರ್‌-3ಬಿ ನಡುವೆ ಕೆಲವು ವಹಿವಾಟುದಾರರು ಸಮನ್ವಯ ಕಾಯ್ದುಕೊಳ್ಳಬೇಕಾಗುತ್ತದೆ. ರಿಟರ್ನ್ ಫೈಲಿಂಗ್‌ನಲ್ಲಿ ಪರಿಚಯಿಸಿದ ಕಠಿಣ ನಿಯಮಗಳಿಂದಾಗಿ ಬಹಳಷ್ಟು ವ್ಯಾಪಾರಸ್ಥರು ಜಿಎಸ್‌ಟಿಆರ್‌-9 ಅನ್ನು ಸಮರ್ಪಕವಾಗಿ ಸಲ್ಲಿಸಲು ಸಾಧ್ಯವಾಗಿಲ್ಲ.

ಬಿ2ಬಿ ಹಾಗೂ ಬಿ2ಸಿ ಮಾರಾಟ ತಪ್ಪಾಗಿ ವರದಿಯಾಗಿರುತ್ತದೆ. ಇದನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಒಂದು ಸಾರಿ ಮಾತ್ರ ತಿದ್ದುಪಡಿ ಮಾಡುವುದಕ್ಕೆ ಅವಕಾಶ ಇರುವುದೇ ಇದಕ್ಕೆ ಕಾರಣ.

ಪುನರಾವಲೋಕನ ಅಗತ್ಯ

ಜಿಎಸ್‌ಟಿಆರ್‌-9 ಅನ್ನು ಯಶಸ್ವಿಯಾಗಿ ಫೈಲ್ ಮಾಡಿದ ನಂತರ ಮಾಹಿತಿಯನ್ನು ಸಮಗ್ರವಾಗಿ ಪುನರಾವಲೋಕನ ಮಾಡಬೇಕು. ಲೆಕ್ಕದ ಪುಸ್ತಕ ಹಾಗೂ ಜಿಎಸ್ ಟಿಯ ವಾರ್ಷಿಕ ರಿಟರ್ನ್ಸ್ ನಡುವಣ ವ್ಯತ್ಯಾಸ ತಿಳಿದುಕೊಂಡರೆ ಲೆಕ್ಕ ಪತ್ರಗಳ ಸಮನ್ವಯ ಸರಿಯಾಗಿರುತ್ತದೆ. ಯಾವುದೇ ತಪ್ಪಾಗದಂತೆ ರಿಟರ್ನ್ಸ್ ಫೈಲ್ ಮಾಡಲು ಸರಿಯಾದ ಸೇವೆಯನ್ನು ನೆಚ್ಚಿಕೊಳ್ಳುವುದು ಸೂಕ್ತ. ಇಂತಹ ಸೇವೆಯು ತಪ್ಪುಗಳನ್ನು ಗುರುತಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಇಷ್ಟೆಲ್ಲ ತೊಂದರೆಗಳು ಇರುವುದರಿಂದ ಉದ್ದಿಮೆ ಸಂಸ್ಥೆಗಳು ಮತ್ತು ವಹಿವಾಟುದಾರರು ತಡಮಾಡದೆ ಜಿಎಸ್‌ಟಿಆರ್‌-9 ಅನ್ನು ಸಮರ್ಪಕವಾಗಿ ಸಿದ್ಧಪಡಿಸಲು ಮುಂದಾಗಬೇಕು.

ಜಿಎಸ್‌ಟಿಆರ್‌-9 ನಲ್ಲಿ ಇರುವ ಪ್ರಸಕ್ತ ತೊಂದರೆಗಳನ್ನೆಲ್ಲ ಬಗೆಹರಿಸಬಹುದು. ಇದನ್ನು ಆದ್ಯತೆ ಮೇರೆಗೆ ಸರಿಪಡಿಸುವ ಅವಶ್ಯಕತೆಯೂ ಇದೆ. ಹೊಸ ಜಿಎಸ್‌ಟಿ ರಿಟರ್ನ್ ವ್ಯವಸ್ಥೆ ಪರಿಚಯಿಸುವ ಆಲೋಚನೆ ಇದೆ. ಒಂದು ಸಲ ತೆರಿಗೆದಾರರು ಯಶಸ್ವಿಯಾಗಿ ವಾರ್ಷಿಕ ರಿಟರ್ನ್ಸ್ ಫೈಲ್ ಮಾಡಿದರೆ ಮುಂದಿನ ಸಲ ಫೈಲ್ ಮಾಡುವಾಗ ಯಾವುದೇ ತೊಂದರೆಯಾಗುವುದಿಲ್ಲ.

ಲೆಕ್ಕ ಪುಸ್ತಕ ಹಾಗೂ ಜಿಎಸ್‌ಟಿ ನಡುವೆ ಸಮನ್ವಯ ಮಾಡಲು ಕೆಲ ವ್ಯಾಪಾರಸ್ಥರು ಹಿಂದೇಟು ಹಾಕುತ್ತಾರೆ. ತೆರಿಗೆ ಅಧಿಕಾರಿಗಳು ಅತಿಹೆಚ್ಚಿನ ವಹಿವಾಟನ್ನು ಗಣನೆಗೆ ತೆಗೆದುಕೊಂಡು ಹೆಚ್ಚು ತೆರಿಗೆ ವಿಧಿಸುತ್ತಾರೆ ಎನ್ನುವುದೇ ಇದಕ್ಕೆ ಕಾರಣ. ಇನ್ನೊಂದು ವಿಶೇಷವೆಂದರೆ ಸಮನ್ವಯ ಮಾಡುವಾಗ ಹೆಚ್ಚಿನ ತೆರಿಗೆ ಪಾವತಿ ಮಾಡಬೇಕಾಗಿ ಕಂಡುಬಂದರೂ ಸಹ ಹೆಚ್ಚುವರಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ಗೆ (ಐಟಿಸಿ) ಬೇಡಿಕೆ ಸಲ್ಲಿಸಲು ಜಿಎಸ್‌ಟಿಆರ್‌-9 ರ ಮೂಲಕ ಮಾಡಲು ಆಗುವುದಿಲ್ಲ.

(ಲೇಖಕ: ಕ್ಲಿಯರ್ ಟ್ಯಾಕ್ಸ್‌ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.