ಬೆಂಗಳೂರು: ಜಿಎಸ್‌ಟಿ ದರ ಪರಿಷ್ಕರಣೆಯು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆಗಳಿಗೆ ಬೆಂಬಲ ನೀಡುವ ಉದ್ದೇಶ ಹೊಂದಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಬಿ.ಆರ್. ಗಣೇಶ್ ರಾವ್ ಹೇಳಿದ್ದಾರೆ.
ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ‘ಕಾಸಿಯಾ’ ಸ್ವಾಗತಿಸುತ್ತದೆ. ಇದು ಎಂಎಸ್‌ಎಂಇಗಳಿಗೆ ಉತ್ತೇಜನ ನೀಡಲಿದೆ. ವ್ಯವಹಾರಗಳನ್ನು ಸುಲಭಗೊಳಿಸಲಿದೆ. ಪರಿಷ್ಕೃತ ಜಿಎಸ್‌ಟಿ ದರಗಳು ರೈತರು, ಕುಟುಂಬಗಳು ಮತ್ತು ಉದ್ಯಮಗಳಿಗೆ ಅನುಕೂಲಕರವಾಗಿವೆ. ಅಗತ್ಯ ವಸ್ತುಗಳು, ಆರೋಗ್ಯಸೇವೆ, ಶಿಕ್ಷಣ, ಕೃಷಿ, ವಾಹನಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ತೆರಿಗೆ ಹಂತಗಳನ್ನು ಸರಳಗೊಳಿಸಿರುವುದರಿಂದ ವ್ಯವಹಾರಗಳನ್ನು ಹೆಚ್ಚಿಸುವುದಲ್ಲದೆ, ಗ್ರಾಹಕರ ಮೇಲಿನ ಹೊರೆ ಕಡಿಮೆ ಆಗುತ್ತದೆ ಎಂದು ಹೇಳಿದ್ದಾರೆ.
ಮರುಪಾವತಿ ತ್ವರಿತವಾಗಲಿವೆ. ಇದು ಸಣ್ಣ ಉದ್ಯಮಗಳಿಗೆ ನಗದು ಹರಿವನ್ನು ಹೆಚ್ಚಿಸುತ್ತದೆ. ಅಗತ್ಯ ಕಚ್ಚಾ ವಸ್ತುಗಳು ಮತ್ತು ಸೇವೆಗಳ ಮೇಲಿನ ತೆರಿಗೆ ಕಡಿಮೆಯಾಗಿ ತಯಾರಿಕಾ ವೆಚ್ಚ ಕಡಿಮೆ ಆಗುತ್ತದೆ. ಇದು ಸಣ್ಣ ಕೈಗಾರಿಕೆಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.