ADVERTISEMENT

ಜಿಎಸ್‌ಟಿ ಸರಳೀಕರಣ; ₹14 ಲಕ್ಷ ಕೋಟಿ ವರಮಾನ: ಎಸ್‌ಬಿಐ ಸಂಶೋಧನಾ ವರದಿ

ಪಿಟಿಐ
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
<div class="paragraphs"><p>ಜಿಎಸ್‌ಟಿ</p></div>

ಜಿಎಸ್‌ಟಿ

   

ನವದೆಹಲಿ: ಪ್ರಸ್ತಾವಿತ ಜಿಎಸ್‌ಟಿ ಸರಳೀಕರಣದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯಗಳಿಗೆ ಅಂದಾಜು ₹14 ಲಕ್ಷ ಕೋಟಿಗೂ ಹೆಚ್ಚು ವರಮಾನ ದೊರೆಯುವ ನಿರೀಕ್ಷೆ ಇದೆ ಎಂದು ಎಸ್‌ಬಿಐ ಸಂಶೋಧನಾ ವರದಿ ಮಂಗಳವಾರ ತಿಳಿಸಿದೆ.

2018 ಮತ್ತು 2019ರಲ್ಲಿ ನಡೆದ ಜಿಎಸ್‌ಟಿ ಸರಳೀಕರಣದಲ್ಲಿ ಕಂಡು ಬಂದಂತೆ, ಮಾಸಿಕ ಸಂಗ್ರಹದಲ್ಲಿ ಅಲ್ಪಾವಧಿವರೆಗೆ ಶೇ 3ರಿಂದ ಶೇ 4ರಷ್ಟು ಕಡಿಮೆಯಾಗಬಹುದು. ಇದು ಮಾಸಿಕವಾಗಿ ₹5 ಸಾವಿರ ಕೋಟಿಯಷ್ಟಾಗಿರಲಿದೆ. ಆದರೆ, ವರಮಾನವು ಶೇ 5ರಿಂದ ಶೇ 6ರಷ್ಟು ನಿರಂತರವಾಗಿ ಹೆಚ್ಚಳವಾಗಲಿದೆ ಎಂದು ತಿಳಿಸಿದೆ.

ADVERTISEMENT

ರಾಜ್ಯ ಸರ್ಕಾರಗಳು ₹10 ಲಕ್ಷ ಕೋಟಿ ಎಸ್‌ಜಿಎಸ್‌ಟಿಯಾಗಿ ಪಡೆದರೆ, ಕೇಂದ್ರದ ತೆರಿಗೆ ಪಾಲಿನ ಮೂಲಕ ₹4.10 ಲಕ್ಷ ಕೋಟಿ ಪಡೆಯಲಿವೆ. ಒಟ್ಟು ₹14.10 ಲಕ್ಷ ಕೋಟಿ ಜಿಎಸ್‌ಟಿ ವರಮಾನ ಸಂಗ್ರಹವಾಗಬಹುದು ಎಂದು ತಿಳಿಸಿದೆ.

ಕೇಂದ್ರ ಸರ್ಕಾರ ಪ್ರಸ್ತುತ ಇರುವ ನಾಲ್ಕು ಹಂತದ ಜಿಎಸ್‌ಟಿಯನ್ನು (ಶೇ 5, ಶೇ 12, ಶೇ 18 ಮತ್ತು ಶೇ 28) ಎರಡು ಹಂತಕ್ಕೆ (ಶೇ 5 ಮತ್ತು ಶೇ 18) ಇಳಿಸಲು ನಿರ್ಧರಿಸಿದೆ. ಕೆಲ ಉತ್ಪನ್ನಗಳ ಮೇಲೆ ಮಾತ್ರ ಶೇ 40ರಷ್ಟು ತೆರಿಗೆ ಹೇರಲು ಪ್ರಸ್ತಾಪಿಸಿದೆ.

ಇತ್ತೀಚೆಗೆ ವಿರೋಧ ಪಕ್ಷಗಳ ಆಡಳಿತವಿರುವ 8 ರಾಜ್ಯಗಳು ಜಿಎಸ್‌ಟಿ ಸರಳೀಕರಣದಿಂದ ₹2 ಲಕ್ಷ ಕೋಟಿವರೆಗೆ ವರಮಾನ ನಷ್ಟವಾಗಲಿದೆ ಎಂದು ಹೇಳಿದ್ದು, ನಷ್ಟವನ್ನು ತುಂಬಿ ಕೊಡಬೇಕು ಎಂದು ಒತ್ತಾಯಿಸಿವೆ. 

ಆಗಸ್ಟ್ 19ರಂದು ಎಸ್‌ಬಿಐ ಸಂಶೋಧನಾ ವರದಿಯು ₹85 ಸಾವಿರ ಕೋಟಿ ವರಮಾನ ನಷ್ಟವಾಗಬಹುದು ಎಂದು ಹೇಳಿತ್ತು. ಆದರೆ ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ, ಜಿಎಸ್‌ಟಿ ಸರಳೀಕರಣದ ನಂತರ ಜಿಎಸ್‌ಟಿ ವರಮಾನ ಸಂಗ್ರಹದಲ್ಲಿ ಯಾವುದೇ ಇಳಿಕೆ ಆಗುವುದಿಲ್ಲ. ರಾಜ್ಯಗಳು ಜಿಎಸ್‌ಟಿ ಸಂಗ್ರಹದಿಂದ ಹೆಚ್ಚಿನ ಲಾಭ ಗಳಿಸುತ್ತವೆ ಎಂದು ಹೇಳಿದೆ. 

ಕೇಂದ್ರ ಮತ್ತು ರಾಜ್ಯಗಳ ನಡುವೆ ಜಿಎಸ್‌ಟಿ ಸಮವಾಗಿ ಹಂಚಿಕೆಯಾಗಲಿದ್ದು, ತಲಾ ಶೇ 50ರಷ್ಟು ಪಡೆಯಲಿವೆ. ಅಲ್ಲದೆ, ತೆರಿಗೆ ಹಂಚಿಕೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ತನ್ನ ಪಾಲಿನ ಶೇ 41ರಷ್ಟನ್ನು ರಾಜ್ಯಗಳಿಗೆ ನೀಡಬೇಕಾಗುತ್ತದೆ. ಹೀಗಾಗಿ, ರಾಜ್ಯಗಳಿಗೆ ಒಟ್ಟು ಪಾಲು ಶೇ 70ರಷ್ಟಾಗಲಿದೆ ಎಂದು ತಿಳಿಸಿದೆ.

ಜಿಎಸ್‌ಟಿ ಸರಳೀಕರಣವು ದೀರ್ಘಾವಧಿಯಲ್ಲಿ ವರಮಾನ ಹೆಚ್ಚಿಸಲಿದೆ ಎಂದು ಹೇಳಿದೆ. 

ಇ.ವಿ ಕಾರು ಆಮದಿಗೆ ತೆರಿಗೆ ಹೆಚ್ಚಿಸಿ

ಐಷಾರಾಮಿ ಬೆಲೆಯ ವಿದ್ಯುತ್‌ಚಾಲಿತ ವಾಹನಗಳ (ಇ.ವಿ) ಮೇಲಿನ ತೆರಿಗೆ ಹೆಚ್ಚಿಸುವಂತೆ ತೆರಿಗೆ ಸಮಿತಿ ಪ್ರಸ್ತಾಪಿಸಿದೆ.

ಇದು ಟೆಸ್ಲಾ, ಮರ್ಸಿಡಿಸ್ ಬೆಂಜ್‌, ಬಿಎಂಡಬ್ಲ್ಯು, ಬಿವೈಡಿಯಂತಹ ಕಾರು ತಯಾರಕ ಕಂಪನಿಗಳ ಮಾರಾಟದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

ಪ್ರಸ್ತುತ ಎಲ್ಲ ವಿದ್ಯುತ್‌ಚಾಲಿತ ವಾಹನಗಳಿಗೆ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಈ ಜಿಎಸ್‌ಟಿಯನ್ನು ₹20 ಲಕ್ಷದಿಂದ ₹40 ಲಕ್ಷದವರೆಗಿನ ಬೆಲೆಯ ವಾಹನಗಳಿಗೆ ಶೇ 18ಕ್ಕೆ ಹೆಚ್ಚಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಅಲ್ಲದೆ, ₹40 ಲಕ್ಷಕ್ಕಿಂತ ಮೇಲಿರುವ ವಾಹನಗಳಿಗೆ ಶೇ 28ರಷ್ಟು ಜಿಎಸ್‌ಟಿ ವಿಧಿಸುವಂತೆಯೂ ಪ್ರಸ್ತಾಪಿಸಿದೆ.

ಆದರೆ, ಕೇಂದ್ರ ಸರ್ಕಾರವು, ಶೇ 28ರಷ್ಟು ತೆರಿಗೆ ದರವನ್ನು ತೆಗೆದು ಹಾಕಲು ನಿರ್ಧರಿಸಿದೆ. ಹೀಗಾಗಿ, ಜಿಎಸ್‌ಟಿ ಮಂಡಳಿ ಇ.ವಿಗಳ ಮೇಲಿನ ತೆರಿಗೆಯನ್ನು ಶೇ 18ಕ್ಕೆ ಹೆಚ್ಚಿಸುವ ಅಥವಾ ಕೆಲವು ಐಷಾರಾಮಿ ಸರಕುಗಳಿಗಾಗಿ ಹೊಸದಾಗಿ ಯೋಜಿಸಿರುವ ಶೇ 40ರ ವರ್ಗಕ್ಕೆ ಸೇರಿಸುವ ಆಯ್ಕೆ ಹೊಂದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಜುಲೈ ತಿಂಗಳಿನಲ್ಲಿ ಟಾಟಾ ಮೋಟರ್ಸ್‌ ದೇಶದ ವಿದ್ಯುತ್‌ಚಾಲಿತ ಕಾರುಗಳ ಮಾರುಕಟ್ಟೆಯಲ್ಲಿ ಶೇ 40ರಷ್ಟು ಪಾಲನ್ನು ಹೊಂದಿತ್ತು. ಮಹೀಂದ್ರ ಆ್ಯಂಡ್ ಮಹೀಂದ್ರ (ಶೇ 18), ಬಿವೈಡಿ (ಶೇ 3) ಮರ್ಸಿಡಿಸ್ ಬೆಂಜ್ ಮತ್ತು ಬಿಎಂಡಬ್ಲ್ಯು ತಲಾ ಶೇ 2ರಷ್ಟು ಪಾಲು ಹೊಂದಿವೆ. ಟೆಸ್ಲಾ, ವಾಹನಗಳ ಬುಕಿಂಗ್‌ ಮಾತ್ರ ಪ್ರಾರಂಭಿಸಿದೆ, ವಿತರಣೆ ಇನ್ನು ಆರಂಭಿಸಿಲ್ಲ.

600 ಕಾರುಗಳಿಗೆ ಟೆಸ್ಲಾ ಕಾರ್ಯಾದೇಶ

ಜುಲೈನಿಂದ ಈ ವರೆಗೆ 600ಕ್ಕೂ ಹೆಚ್ಚು ವಿದ್ಯುತ್‌ಚಾಲಿತ ಕಾರುಗಳಿಗೆ ಟೆಸ್ಲಾ ಕಂಪನಿ ಕಾರ್ಯಾದೇಶ ಪಡೆದುಕೊಂಡಿದೆ ಎಂದು ಬ್ಲೂಮ್‌ಬರ್ಗ್‌ ನ್ಯೂಸ್‌ ವರದಿ ಉಲ್ಲೇಖಿಸಿ ರಾಯಿಟರ್ಸ್‌ ವರದಿ ಮಾಡಿದೆ.

ಆದರೆ, ಕಂಪನಿ ನಿರೀಕ್ಷಿಸಿದಕ್ಕಿಂತಲೂ ಇದು ಕಡಿಮೆ ಎಂದು ಹೇಳಿದೆ. ಜುಲೈ ಮಧ್ಯಭಾಗದಲ್ಲಿ ಉದ್ಯಮಿ ಇಲಾನ್‌ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿತ್ತು.

ಪ್ರಸಕ್ತ ವರ್ಷದಲ್ಲಿ 350ರಿಂದ 500 ಕಾರುಗಳನ್ನು ಭಾರತಕ್ಕೆ ರವಾನೆ ಮಾಡಲು ಟೆಸ್ಲಾ ಯೋಜಿಸಿದೆ. ಅದರಲ್ಲಿ ಮೊದಲ ಬ್ಯಾಚ್‌ ಸೆಪ್ಟೆಂಬರ್‌ ಆರಂಭದಲ್ಲಿ ಶಾಂಘೈನಿಂದ ಬರಲಿವೆ. ಮುಂಬೈ, ದೆಹಲಿ, ಪುಣೆ ಮತ್ತು ಗುರುಗ್ರಾಮದಲ್ಲಿ ಆರಂಭಿಕವಾಗಿ ವಾಹನಗಳನ್ನು ವಿತರಿಸಲಿದೆ ಎಂದು ಹೇಳಿದೆ.

ಜುಲೈನಲ್ಲಿ ಭಾರತದಲ್ಲಿ ಬಿಡುಗಡೆಯಾದ ಟೆಸ್ಲಾದ ‘ಮಾಡೆಲ್‌ ವೈ’ ಕಾರಿನ ಬೆಲೆ ₹61.67 ಲಕ್ಷವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.