ADVERTISEMENT

ತರಂಗಾಂತರ ಕಂತು ಜೊತೆ ಶೇ 18ರಷ್ಟು ಜಿಎಸ್‌ಟಿ ಪಾವತಿ

​ಪ್ರಜಾವಾಣಿ ವಾರ್ತೆ
Published 27 ಮೇ 2024, 14:11 IST
Last Updated 27 ಮೇ 2024, 14:11 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೂರಸಂಪರ್ಕ ವಲಯದ ಕಂಪನಿಗಳು ತರಂಗಾಂತರ ಶುಲ್ಕಗಳಿಗೆ ಪಾವತಿಸುವ ಕಂತುಗಳೊಂದಿಗೆ ಜಿಎಸ್‌ಟಿಯನ್ನೂ ಪಾವತಿಸಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರಸಂಪರ್ಕ ಇಲಾಖೆಯು (ಡಿಒಟಿ) ಮೊಬೈಲ್ ಫೋನ್ ಸೇವೆಗಳಿಗಾಗಿ ಮುಂದಿನ ಸುತ್ತಿನ ತರಂಗಾಂತರದ ಹರಾಜನ್ನು ಎಂಟು ಬ್ಯಾಂಡ್‌ಗಳಾಗಿ ಜೂನ್ 6ರಂದು ನಡೆಸಲಿದೆ. ಈ ಹರಾಜಿನ ಮೂಲ ಬೆಲೆ ₹96,317 ಎಂದು ನಿಗದಿ ಮಾಡಲಾಗಿದೆ.

ತರಂಗಾಂತರವನ್ನು 20 ವರ್ಷಗಳಿಗೆ ನೀಡಲಾಗುವುದು. ಈ ಹರಾಜಿನಲ್ಲಿ ತರಂಗಾಂತರ ಪಡೆದುಕೊಂಡವರು 20 ಸಮಾನ ವಾರ್ಷಿಕ ಕಂತುಗಳಲ್ಲಿ ಪಾವತಿ ಮಾಡಲು ಅವಕಾಶ ನೀಡಲಾಗುವುದು.

ADVERTISEMENT

ದೂರಸಂಪರ್ಕ ಕಂಪನಿಗಳು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಪ್ರತಿ ಕಂತಿನೊಂದಿಗೆ ಶೇ 18ರಷ್ಟು ಪಾವತಿಸಬೇಕಾಗುತ್ತದೆ. ಜಿಎಸ್‌ಟಿ ಪರಿಷತ್‌ನ ಸಭೆಯಲ್ಲಿ ತರಂಗಾತರ ಹರಾಜಿನಲ್ಲಿ ತರಂಗಾಂತರ ಪಡೆದ ಕಂಪನಿಗಳು ಜಿಎಸ್‌ಟಿ ಪಾವತಿಸುವ ವಿಧಾನವನ್ನು ಸ್ಪಷ್ಟಪಡಿಸುವ ಸಾಧ್ಯತೆಯಿದೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. 

ಈ ಸ್ಪಷ್ಟೀಕರಣವು ಹರಾಜು ಪ್ರಕ್ರಿಯೆಯಲ್ಲಿ ಜಿಎಸ್‌ಟಿಯನ್ನು ಸಂಗ್ರಹಿಸುವ ವಿಧಾನದ ಬಗ್ಗೆ ಇರುವ ಗೊಂದಲವನ್ನು ತಿಳಿಗೊಳಿಸಲಿದೆ.

ತರಂಗಾಂತರ ಶುಲ್ಕಗಳನ್ನು ನಿರ್ದಿಷ್ಟ ಅವಧಿಯಲ್ಲಿ ಹಂತ ಹಂತವಾಗಿ ಪಾವತಿಸಬೇಕಾಗುತ್ತದೆ. ಸರ್ಕಾರ ಮತ್ತು ದೂರಸಂಪರ್ಕ ಕಂಪನಿಗಳ ನಡುವೆ ವ್ಯಾಜ್ಯ ಉಂಟಾಗುವುದನ್ನು ತಪ್ಪಿಸುವುದಕ್ಕಾಗಿ ಜಿಎಸ್‌ಟಿ ಪರಿಷತ್‌ ಈ ಸ್ಪಷ್ಟೀಕರಣವನ್ನು ನೀಡಬೇಕು ಎಂದು ಮೂರ್ ಸಿಂಘಿಯ ಕಾರ್ಯನಿರ್ವಾಹಕ ನಿರ್ದೇಶಕ ರಜತ್ ಮೋಹನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.