ADVERTISEMENT

ಎಚ್‌–1ಬಿ ವೀಸಾ ಶುಲ್ಕ ಹೆಚ್ಚಳ: ಷೇರು ಸೂಚ್ಯಂಕ ಇಳಿಕೆ

ಪಿಟಿಐ
Published 24 ಸೆಪ್ಟೆಂಬರ್ 2025, 14:29 IST
Last Updated 24 ಸೆಪ್ಟೆಂಬರ್ 2025, 14:29 IST
ಷೇರುಪೇಟೆ
ಷೇರುಪೇಟೆ   

ನವದೆಹಲಿ: ಅಮೆರಿಕದ ಎಚ್‌–1ಬಿ ವೀಸಾ ಶುಲ್ಕ ಹೆಚ್ಚಳವು ದೇಶದ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಷೇರಿನ ಮೌಲ್ಯದ ಮೇಲೆ ಪರಿಣಾಮ ಬೀರುವುದು ಮುಂದುವರಿದಿದೆ. ಹೀಗಾಗಿ, ಬುಧವಾರದ ವಹಿವಾಟಿನಲ್ಲಿ ಷೇರುಪೇಟೆ ಸೂಚ್ಯಂಕಗಳು ಇಳಿಕೆ ಕಂಡಿವೆ.

ಹೂಡಿಕೆದಾರರು ಲಾಭ ಗಳಿಕೆ ಉದ್ದೇಶಕ್ಕಾಗಿ ಬ್ಯಾಂಕಿಂಗ್‌, ವಾಹನ ವಲಯದ ಕಂಪನಿಗಳ ಷೇರುಗಳ ಮಾರಾಟಕ್ಕೆ ಮುಂದಾಗಿದ್ದು ಮತ್ತು ವಿದೇಶಿ ಬಂಡವಾಳದ ಹೊರಹರಿವು ಸಹ ಸೂಚ್ಯಂಕಗಳ ಇಳಿಕೆ ಕಾರಣವಾಯಿತು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 386 ಅಂಶ ಇಳಿಕೆಯಾಗಿ, 81,715ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 112 ಅಂಶ ಕಡಿಮೆಯಾಗಿ, 25,056ಕ್ಕೆ ಕೊನೆಗೊಂಡಿದೆ.

ADVERTISEMENT

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರದ ವಹಿವಾಟಿನಲ್ಲಿ ₹3,551 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. 

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 0.44ರಷ್ಟು ಏರಿಕೆಯಾಗಿದೆ. ಪ್ರತೀ ಬ್ಯಾರೆಲ್ ದರ 67.93 ಡಾಲರ್ ಆಗಿದೆ. 

ಚಿನ್ನ, ಬೆಳ್ಳಿ ದರ ಇಳಿಕೆ:

10 ಗ್ರಾಂ ಚಿನ್ನದ (ಶೇ 99.9 ಪರಿಶುದ್ಧತೆ) ದರವು ₹900 ಇಳಿಕೆಯಾಗಿ, ₹1.18 ಲಕ್ಷದಂತೆ ಮಾರಾಟವಾಗಿದೆ. ಆಭರಣ ಚಿನ್ನದ (ಶೇ 99.5 ಪರಿಶುದ್ಧತೆ) ಸರ ಇಷ್ಟೇ ಪ್ರಮಾಣದಲ್ಲಿ ಕಡಿಮೆಯಾಗಿ, ₹1,17,400 ಆಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ₹600 ಇಳಿಕೆಯಾಗಿ, ₹1.39 ಲಕ್ಷವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.