ADVERTISEMENT

ಕಿರುಸಾಲ: ಗ್ರಾಹಕರಿಗಾಗಿ ಸಹಾಯವಾಣಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 14:36 IST
Last Updated 20 ಜೂನ್ 2025, 14:36 IST
<div class="paragraphs"><p>ಸಹಾಯವಾಣಿ</p></div>

ಸಹಾಯವಾಣಿ

   

ಬೆಂಗಳೂರು: ಕಿರು ಹಣಕಾಸು ಕ್ಷೇತ್ರದ ಬಲವರ್ಧನೆ ಮತ್ತು ಸಾಲ ಪಡೆದ ಗ್ರಾಹಕರ ರಕ್ಷಣೆ ಸೇರಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಸ್ವಯಂ ನಿಯಂತ್ರಣ ಒಕ್ಕೂಟವು (ಎಸ್‌ಆರ್‌ಒ) ಸಹಾಯವಾಣಿ ಆರಂಭಿಸಿದೆ.

ಸಾಲ ವಸೂಲಾತಿ ಸಮಸ್ಯೆ, ಸಾಲಗಾರರು ಎದುರಿಸುತ್ತಿರುವ ಒತ್ತಡ ಮತ್ತು ಇನ್ನಿತರ ಸನ್ನಿವೇಶಗಳ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಸಣ್ಣ ಹಣಕಾಸು ಕ್ಷೇತ್ರದಲ್ಲಿ ಸ್ವಯಂ ನಿಯಂತ್ರಣ ಒಕ್ಕೂಟ ಸ್ಥಾಪಿಸಿದೆ. ಇದರ ಒಕ್ಕೂಟದ ರಾಷ್ಟ್ರೀಯ ಸಭೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯಿತು. ಈ ವೇಳೆ ಸಹಾಯವಾಣಿ ಪ್ರಾರಂಭಕ್ಕೆ ಚಾಲನೆ ನೀಡಿದೆ.

ADVERTISEMENT

ಗ್ರಾಹಕರು 1800–121–1322 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಸಹಾಯವಾಣಿಯು ಪ್ರಸ್ತುತ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿದ್ದು, ಶೀಘ್ರದಲ್ಲೇ ಹತ್ತು ಪ್ರಾದೇಶಿಕ ಭಾಷೆಗಳಿಗೆ ವಿಸ್ತರಿಸಲಾಗುತ್ತಿದೆ. ಇದೇ ವೇಳೆ ಗ್ರಾಹಕರ ದೂರು ಪರಿಹಾರ ವ್ಯವಸ್ಥೆಯ (ಸಿಜಿಆರ್‌ಎಂ) ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಕರ್ನಾಟಕದಲ್ಲಿ ಇತ್ತೀಚೆಗೆ ಕೈಗೊಂಡ, ಜಾರಿಗೊಳಿಸಲಾದ ನೀತಿ ನಿಯಮಗಳೂ ಸೇರಿದಂತೆ ಕಿರು ಹಣಕಾಸು ಕ್ಷೇತ್ರ ಎದುರಿಸುತ್ತಿರುವ ಸವಾಲುಗಳ ಚರ್ಚೆ ನಡೆಯಿತು. ಸಭೆಯಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರು, ಪಾಲುದಾರರು ಮತ್ತು ವಿವಿಧ ಕಿರು ಹಣಕಾಸು ಕಂಪನಿಗಳ ಮುಖ್ಯಸ್ಥರು ಭಾಗವಹಿಸಿದ್ದರು.

‘ದೇಶದ ಒಟ್ಟು ಸಾಲ ವ್ಯವಸ್ಥೆಯಲ್ಲಿ ಕಿರು ಹಣಕಾಸು ನೆರವಿನ ಪಾಲು ಕೇವಲ ಶೇಕಡ ಮೂರರಷ್ಟಿದ್ದರೂ ಅದು ಬೀರುವ ಪರಿಣಾಮ ಅಗಾಧ. ಹಾಗಾಗಿ ಗ್ರಾಹಕರ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡು, ತಂತ್ರಜ್ಞಾನ ಪರಿಹಾರಗಳನ್ನು ಬಳಸಿಕೊಂಡು ಮಾನವ ಸ್ಪರ್ಶವನ್ನು ಸಾಲ ವಿತರಣೆಯಲ್ಲಿ ಅನುಸರಿಸಬೇಕು’ ಎಂದು ಸಾ-ಧನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಜಿ.ಜಿ. ಮಾಮ್ಮೆನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.