ADVERTISEMENT

ದುಬಾರಿ ಮದ್ಯ: ಸರ್ಕಾರದ ವರಮಾನ ನಷ್ಟ

ಮದ್ಯ ತಯಾರಿಕಾ ಕಂಪನಿಗಳ ಸಂಘಟನೆಗಳ ಅನಿಸಿಕೆ

ಪಿಟಿಐ
Published 7 ಮೇ 2020, 21:14 IST
Last Updated 7 ಮೇ 2020, 21:14 IST
–
   

ನವದೆಹಲಿ: ಹೆಚ್ಚುವರಿ ವರಮಾನ ಸಂಗ್ರಹಿಸಲು ಮದ್ಯದ ಮೇಲೆ ಅಧಿಕ ಸುಂಕ ವಿಧಿಸುವ ರಾಜ್ಯ ಸರ್ಕಾರಗಳ ನಿರ್ಧಾರವು ದೀರ್ಘಾವಧಿಯಲ್ಲಿ ಮೂಲ ಉದ್ದೇಶಕ್ಕೆ ಮುಳುವಾಗಬಹುದು ಎಂದು ಮದ್ಯ ತಯಾರಿಕಾ ಕಂಪನಿಗಳ ಸಂಘಟನೆಗಳು ತಿಳಿಸಿವೆ.

40 ದಿನಗಳ ನಂತರ ಸೋಮವಾರದಿಂದ ಕರ್ನಾಟಕವೂ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮದ್ಯ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಮಾರಾಟಕ್ಕೆ ಅವಕಾಶ ನೀಡಿದ ಬೆನ್ನಲ್ಲೆ ಅಬಕಾರಿ ಸುಂಕ ಹೆಚ್ಚಿಸಿರುವುದರಿಂದ ಮದ್ಯದ ಬೆಲೆ ಗಮನಾರ್ಹ ಏರಿಕೆ ಕಂಡಿದೆ.

ಮದ್ಯ ಮಾರಾಟದಿಂದ ಹೆಚ್ಚಿನ ವರಮಾನ ಸಂಗ್ರಹಿಸಲು ರಾಜ್ಯ ಸರ್ಕಾರಗಳು ಕೊರೊನಾ ವಿಶೇಷ ಸೆಸ್‌ ವಿಧಿಸಲು ಮುಂದಾಗಿವೆ. ಇದರಿಂದ ಆರಂಭದ ದಿನಗಳಲ್ಲಿ ತೆರಿಗೆ ಸಂಗ್ರಹವು ಹೆಚ್ಚಳಗೊಳ್ಳಲಿದೆ. ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ ಭರ್ತಿ ಮಾಡಿಕೊಳ್ಳಲು ಈ ಹೆಚ್ಚುವರಿ ವರಮಾನದಿಂದಷ್ಟೇ ಸಾಧ್ಯವಾಗಲಾರದು. ಆಂಧ್ರಪ್ರದೇಶ ಮತ್ತು ದೆಹಲಿ ಸರ್ಕಾರಗಳು ವಿಧಿಸಿರುವಂತೆ ಗರಿಷ್ಠ ಮಟ್ಟದ ಸೆಸ್‌, ದೀರ್ಘಾವಧಿಯಲ್ಲಿ ಮದ್ಯ ಮಾರಾಟವೇ ಕಡಿಮೆಯಾಗಿ ಸರ್ಕಾರಗಳಿಗೆ ಬರಬೇಕಾದ ವರಮಾನವೂ ಕಡಿಮೆಯಾಗಬಹುದು ಎನ್ನುವುದು ತಯಾರಿಕಾ ಕಂಪನಿಗಳ ಆತಂಕವಾಗಿದೆ.

ADVERTISEMENT

ಸದ್ಯಕ್ಕೆ ದೇಶದಾದ್ಯಂತ ಕೇವಲ ಶೇ 25ರಷ್ಟು ಮದ್ಯ ಪೂರೈಕೆ ಮಾಡಲಾಗುತ್ತಿದೆ. ಅನೇಕ ರಾಜ್ಯಗಳಲ್ಲಿ ಮದ್ಯದ ಅಂಗಡಿ, ಬಾರ್‌ ಮತ್ತು ರೆಸ್ಟೊರೆಂಟ್ಸ್‌ಗಳು ಕಾರ್ಯಾರಂಭ ಮಾಡಿಲ್ಲ ಎಂದು ಭಾರತದ ಮದ್ಯ ತಯಾರಿಕಾ ಕಂಪನಿಗಳ ಒಕ್ಕೂಟ (ಸಿಐಎಬಿಸಿ) ಮತ್ತು ಅಖಿಲ ಭಾರತ ಮದ್ಯ ತಯಾರಕರ ಸಂಘ (ಎಐಬಿಎ) ತಿಳಿಸಿವೆ.

‘ದುಬಾರಿ ಬೆಲೆಯ ಕಾರಣಕ್ಕೆ ಮದ್ಯದ ಮಾರಾಟ ಕುಸಿದರೆ ರಾಜ್ಯಗಳ ವರಮಾನವೂ ಕಡಿಮೆಯಾಗಲಿದೆ. ಶೇ 10ರಷ್ಟು ಆಸುಪಾಸಿನಲ್ಲಿ ತೆರಿಗೆ ಹೆಚ್ಚಳಗೊಂಡರೆ ವರಮಾನ ಏರಿಕೆಯಾಗುತ್ತದೆ. ಇದಕ್ಕಿಂತ ಹೆಚ್ಚಿನ ಮಟ್ಟಕ್ಕೆ ತೆರಿಗೆ ಹೆಚ್ಚಿಸಿದರೆ ಮಾರಾಟ ಕುಸಿದು ತೆರಿಗೆ ಸಂಗ್ರಹ ಕಡಿಮೆಯಾಗಲಿದೆ’ ಎಂದು ‘ಸಿಐಎಬಿಸಿ’ ಮಹಾ ನಿರ್ದೇಶಕ ವಿನೋದ ಗಿರಿ ಹೇಳಿದ್ದಾರೆ.

‘ಇ–ಕಾಮರ್ಸ್‌ನಲ್ಲಿ ಮಾರಾಟಕ್ಕೆ ಅನುಮತಿ ಸಿಗಲಿ’
‘ಇ–ಕಾಮರ್ಸ್‌ ಮಳಿಗೆಗಳ ಮೂಲಕ ಮದ್ಯವನ್ನು ಗ್ರಾಹಕರ ಮನೆ ಬಾಗಿಲಿಗೆ ಒದಗಿಸಲು ರಾಜ್ಯ ಸರ್ಕಾರಗಳು ಅನುಮತಿ ನೀಡಬೇಕು’ ಎಂದು ‘ಎಐಬಿಎ’ ಮಹಾ ನಿರ್ದೇಶಕ ಶೋಭನ್‌ ರಾಯ್‌ ಹೇಳಿದ್ದಾರೆ.

ಈ ಸಂಬಂಧ ಪಂಜಾಬ್‌, ಪಶ್ಚಿಮ ಬಂಗಾಳ ಮತ್ತು ಛತ್ತೀಸಗಡ ಸರ್ಕಾರಗಳು ಕ್ರಮ ಕೈಗೊಂಡಿವೆ.

ರಾಜ್ಯ: ಹೆಚ್ಚುವರಿ ಸುಂಕ ಪ್ರಮಾಣ (%)
ಆಂಧ್ರಪ್ರದೇಶ;75
ದೆಹಲಿ;70
ಪಶ್ಚಿಮ ಬಂಗಾಳ;40
ರಾಜಸ್ಥಾನ; 35 ರಿಂದ 45
ಹರಿಯಾಣ; 20
ಕರ್ನಾಟಕ; 11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.