
road. accident
ನವದೆಹಲಿ: ರಾಷ್ಟ್ರೀಯ ಹೆದ್ದಾರಿಯ ನಿರ್ದಿಷ್ಟ ಪ್ರದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಅಪಘಾತ ಸಂಭವಿಸಿದರೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ದಂಡ ವಿಧಿಸಲು ಕೇಂದ್ರ ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ. ರಸ್ತೆ ಅಪಘಾತ ಮತ್ತು ಜೀವಹಾನಿಯನ್ನು ತಪ್ಪಿಸಲು ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ.
ದಂಡ ವಿಧಿಸುವ ಕ್ರಮವು ‘ನಿರ್ಮಾಣ–ನಿರ್ವಹಣೆ–ವರ್ಗಾವಣೆ’ (ಬಿಒಟಿ) ಮಾದರಿಯಲ್ಲಿ ನಿರ್ಮಿಸಲಾದ ಹೆದ್ದಾರಿಗಳಿಗೆ ಅನ್ವಯವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕಾರ್ಯದರ್ಶಿ ವಿ. ಉಮಾಶಂಕರ್ ತಿಳಿಸಿದ್ದಾರೆ.
ಹೆದ್ದಾರಿ ಸಚಿವಾಲಯವು ಬಿಒಟಿ ಕಡತಗಳನ್ನು ಪರಿಷ್ಕರಿಸಿದೆ. ಇನ್ನು ಮುಂದೆ ಗುತ್ತಿಗೆದಾರರು, ತಾವು ಬಿಒಟಿ ಮಾದರಿಯಲ್ಲಿ ನಿರ್ಮಿಸಿದ ಹೆದ್ದಾರಿಯಲ್ಲಿ ನಿರ್ದಿಷ್ಟ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಅಪಘಾತ ಸಂಭವಿಸಿದರೆ ಹೆದ್ದಾರಿಯ ಆ ಪ್ರದೇಶದಲ್ಲಿನ ಲೋಪ ಸರಿಪಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಉಮಾಶಂಕರ್ ಹೇಳಿದ್ದಾರೆ.
‘ನಿರ್ದಿಷ್ಟ ವ್ಯಾಪ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಅಪಘಾತ ಸಂಭವಿಸಿದರೆ, ಗುತ್ತಿಗೆದಾರನಿಗೆ ₹25 ಲಕ್ಷ ದಂಡ ವಿಧಿಸಲಾಗುತ್ತದೆ. ಮುಂದಿನ ವರ್ಷದಲ್ಲಿ ಮತ್ತೊಂದು ಅಪಘಾತ ಅಲ್ಲಿ ಸಂಭವಿಸಿದರೆ ದಂಡದ ಮೊತ್ತವು ₹50 ಲಕ್ಷಕ್ಕೆ ಹೆಚ್ಚಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ. ಹೆದ್ದಾರಿ ಸಚಿವಾಲಯವು ಅಪಘಾತ ನಡೆಯುವ 3,500 ಸ್ಥಳಗಳನ್ನು ಗುರುತಿಸಿದೆ.
ರಸ್ತೆ ಅಪಘಾತಕ್ಕೆ ತುತ್ತಾದವರಿಗೆ ನಗದು ರಹಿತವಾಗಿ ಚಿಕಿತ್ಸೆ ಒದಗಿಸುವ ಯೋಜನೆಗೆ ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಅಧಿಕೃತವಾಗಿ ಚಾಲನೆ ನೀಡಲಿದೆ. ಇದು ದೇಶದೆಲ್ಲೆಡೆ ಅನ್ವಯವಾಗಲಿದೆ. ಯೋಜನೆಯ ಪರೀಕ್ಷಾರ್ಥ ಅನುಷ್ಠಾನದ ಸಂದರ್ಭದಲ್ಲಿ ಪಡೆದ ಅನುಭವಗಳನ್ನು ಆಧರಿಸಿ ಯೋಜನೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ಸಚಿವಾಲಯವು, ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವವರಿಗೆ ನಿರ್ದಿಷ್ಟವಾಗಿ ಗುರುತಿಸಲಾದ ಆಸ್ಪತ್ರೆಗಳಲ್ಲಿ ಮೊದಲ ಏಳು ದಿನಗಳವರೆಗೆ ₹1.5 ಲಕ್ಷದವರೆಗಿನ ಚಿಕಿತ್ಸೆಯನ್ನು ನಗದು ರಹಿತವಾಗಿ ನೀಡಲಾಗುತ್ತದೆ ಎಂದು ಹೇಳಿತ್ತು.
ನಗದು ರಹಿತ ಚಿಕಿತ್ಸೆಯ ಪ್ರಾಯೋಗಿಕ ಅನುಷ್ಠಾನವನ್ನು ಸಚಿವಾಲಯವು ಚಂಡೀಗಢದಲ್ಲಿ 2024ರ ಮಾರ್ಚ್ 14ರಂದು ಆರಂಭಿಸಿದೆ. ಇದನ್ನು ನಂತರ ಆರು ರಾಜ್ಯಗಳಿಗೆ ವಿಸ್ತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.