ADVERTISEMENT

ಅದಾನಿ ಕಂಪನಿಗಳಲ್ಲಿ ಅಕ್ರಮ ರಹಸ್ಯ ಹೂಡಿಕೆ

ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ ವರದಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2023, 14:02 IST
Last Updated 31 ಆಗಸ್ಟ್ 2023, 14:02 IST
<div class="paragraphs"><p>ಅದಾನಿ ಸಮೂಹ</p></div>

ಅದಾನಿ ಸಮೂಹ

   

ನವದೆಹಲಿ (ಪಿಟಿಐ): ಅದಾನಿ ಕುಟುಂಬವು ತನ್ನದೇ ಕಂಪನಿಗಳ ಷೇರುಗಳಲ್ಲಿ ರಹಸ್ಯವಾಗಿ ಹೂಡಿಕೆ ಮಾಡುವ ಮೂಲಕ 2013  ರಿಂದ 2018ರ ಅವಧಿಯಲ್ಲಿ ಸಮೂಹದ ಷೇರುಗಳ ಮೌಲ್ಯದಲ್ಲಿ ಭಾರಿ ಏರಿಕೆ ಕಾಣುವಂತೆ ಮಾಡಿದೆ ಎಂದು ತನಿಖಾ ಪತ್ರಕರ್ತರ ಸಂಘಟನೆಯಾದ ‘ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ’ (ಒಸಿಸಿಆರ್‌ಪಿ) ಆರೋಪ‍ ಮಾಡಿದೆ.

ಪಾರದರ್ಶಕ ಅಲ್ಲದ (opaque), ಮಾರಿಷಸ್‌ ಮೂಲದ ಫಂಡ್‌ಗಳ ಮೂಲಕ ಅದಾನಿ ಸಮೂಹದ ಕಂಪನಿಗಳಲ್ಲಿ ₹8,269 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಪಾರದರ್ಶಕ ಅಲ್ಲದ ಫಂಡ್‌ ಎಂದರೆ ಯಾವೆಲ್ಲಾ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲಾಗಿದೆ ಎನ್ನುವ ಮಾಹಿತಿಯು ಹೂಡಿಕೆದಾರರಿಗೆ ತಿಳಿದಿರುವುದಿಲ್ಲ.

ADVERTISEMENT

ಅದಾನಿ ಸಮೂಹದ ವಿರುದ್ಧ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ರಿಸರ್ಚ್‌ ಆರು ತಿಂಗಳ ಹಿಂದಷ್ಟೇ ಇದೇ ರೀತಿಯ  ಆರೋಪ ಮಾಡಿತ್ತು. ಈಗ, ಜಾರ್ಜ್‌ ಸೊರೋಸ್‌ ಮತ್ತು ರಾಕ್‌ಫೆಲ್ಲರ್‌ ಬ್ರದರ್ಸ್‌ ಸ್ಥಾಪಿಸಿರುವ ಒಸಿಸಿಆರ್‌ಪಿ ಈ ಆರೋಪ ಮಾಡಿದೆ.

ಸಮೂಹದ ಕಂಪನಿಗಳ ಷೇರುಗಳ ಬೆಲೆ ಹೆಚ್ಚಿಸುವ ಉದ್ದೇಶದಿಂದ ಅದಾನಿ ಸಮೂಹದ ಪ್ರವರ್ತಕರ ಕುಟುಂಬದ ಪಾಲುದಾರರು ನಿರ್ವಹಣೆ ಮಾಡುತ್ತಿದ್ದ ಎರಡು ನಿಧಿಗಳ ಮೂಲಕ 2013ರಿಂದ 2018ರ ಅವಧಿಯಲ್ಲಿ ಹೂಡಿಕೆ ಮಾಡಲಾಗಿದೆ. ಈ ಅವಧಿಯಲ್ಲಿಯೇ ಅದಾನಿ ಸಮೂಹವು ದೇಶದ ಅತಿದೊಡ್ಡ ಮತ್ತು ಶಕ್ತಿಶಾಲಿ ಉದ್ಯಮವಾಗಿ ಬೆಳೆಯಿತು ಎಂದು ವರದಿಯು ಹೇಳಿದೆ.

ಅದಾನಿ ಸಮೂಹದ ಸಂಸ್ಥಾಪಕ ಗೌತಮ್‌ ಅದಾನಿ ಮತ್ತು ಅವರ ಅಣ್ಣ ವಿನೋದ್ ಅದಾನಿ ಅವರು ಮಾತ್ರ ಮಾರಿಷಸ್‌ನ ಈ ಎರಡು ನಿಧಿಗಳ ಫಲಾನುಭವಿಗಳು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅದಾನಿ ಸಮೂಹವು ಷೇರು ಮಾರುಕಟ್ಟೆಯಲ್ಲಿ ಶಂಕಾಸ್ಪದ ವಹಿವಾಟು ನಡೆಸುತ್ತಿದೆ ಎಂಬುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸೆಬಿಗೆ 2014ರಲ್ಲಿಯೇ ಸಲ್ಲಿಸಲಾಗಿತ್ತು ಎಂದು ಒಸಿಸಿಆರ್‌ಪಿ ಪತ್ರವೊಂದನ್ನು ಉಲ್ಲೇಖಿಸಿ ಹೇಳಿದೆ. 

ಯು.ಕೆ. ಸಿನ್ಹಾ ಅವರು 2014ರಲ್ಲಿ ಸೆಬಿಯ ಅಧ್ಯಕ್ಷರಾಗಿದ್ದರು. ಈಗ ಅದಾನಿ ಸಮೂಹದ ಮಾಲೀಕತ್ವದಲ್ಲಿರುವ ಎನ್‌ಡಿ ಟಿವಿಯ ನಿರ್ದೇಶಕ ಮತ್ತು ಅಧ್ಯಕ್ಷರಾಗಿದ್ದಾರೆ. 

ರಹಸ್ಯ ಹೂಡಿಕೆದಾರರು ಅದಾನಿ ಷೇರುಗಳನ್ನು ಖರೀದಿಸಿರುವ ಮತ್ತು ಮಾರಾಟ ಮಾಡಿರುವ ಎರಡು ಪ್ರಕರಣಗಳು ಪತ್ತೆಯಾಗಿವೆ. ಅದಾನಿ ಸಮೂಹವು ಪಡೆದುಕೊಂಡಿರುವ ವಿವಿಧ ರೀತಿಯ ತೆರಿಗೆ ಪ್ರಯೋಜನಗಳು ಮತ್ತು ಸಮೂಹದ ಆಂತರಿಕ ಇ–ಮೇಲ್‌ಗಳನ್ನು ಪರಿಶೀಲನೆ ನಡೆಸಿದಾಗ ಈ ಅಂಶವು ಬೆಳಕಿಗೆ ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅರಬ್‌ ಸಂಯುಕ್ತ ಸಂಸ್ಥಾನದ ನಾಸರ್ ಅಲಿ ಶಬಾನ್ ಅಹ್ಲಿ ಮತ್ತು ತೈವಾನ್‌ನ ಚಾಂಗ್‌ ಚುಂಗ್‌–ಲಿಂಗ್‌ ಎನ್ನುವವರು ಮಾರಿಷಸ್‌ ಮೂಲದ ನಿಧಿಗಳ ಮೂಲಕ ಅದಾನಿ ಸಮೂಹದ ಷೇರುಗಳಲ್ಲಿ ಹಲವು ವರ್ಷಗಳವರೆಗೆ ಸಾವಿರಾರು ಕೋಟಿ ಮೊತ್ತದ ವಹಿವಾಟು ನಡೆಸಿದ್ದಾರೆ. ಮಾರಿಷಸ್‌ ಮೂಲದ ಈ ನಿಧಿಗಳನ್ನು ವಿನೋದ್ ಅದಾನಿ ಅವರು ನಡೆಸುತ್ತಿರುವ ದುಬೈ ಮೂಲದ ಕಂಪನಿಯು ನಿರ್ವಹಿಸುತ್ತಿದೆ.

ಒಂದೊಮ್ಮೆ ಅಹ್ಲಿ ಮತ್ತು ಚಾಗ್‌ ಅವರು ಅದಾನಿ ಪ್ರವರ್ತಕರ ಪರವಾಗಿ ವಹಿವಾಟು ನಡೆಸಿದ್ದಾರೆ ಎಂದು ಪರಿಗಣಿಸುವುದಾದರೆ, ಅದಾನಿ ಸಮೂಹದಲ್ಲಿ ಈ ಇಬ್ಬರು ಹೊಂದಿರುವ ಷೇರುಪಾಲನ್ನು ಸೇರಿದರೆ ಒಟ್ಟು ಷೇರುಪಾಲು ಶೇ 75ರಷ್ಟನ್ನೂ ದಾಟುತ್ತದೆ.  ಭಾರತದ ಷೇರುಪೇಟೆಯಲ್ಲಿ ನೋಂದಾಯಿಸಲು ಇರುವ ನಿಯಮವನ್ನು ಇದು ಉಲ್ಲಂಘಿಸಿದೆ ಎದು ಹೇಳಿದೆ. ಕನಿಷ್ಠ ಸಾರ್ವಜನಿಕ ಷೇರುಪಾಲು (ಎಂಪಿಎಸ್‌) ನಿಯಮದ ಪ್ರಕಾರ ಪ್ರವರ್ತಕರು ಕಂಪನಿಯಲ್ಲಿ ಶೇ 75ಕ್ಕಿಂತ ಹೆಚ್ಚಿನ ಷೇರುಪಾಲು ಹೊಂದುವಂತಿಲ್ಲ.

ಅಹ್ಲಿ ಮತ್ತು ಚಾಂಗ್‌ ಅವರ ಹೂಡಿಕೆಗಳಿಗೆ ಅದಾನಿ ಕುಟುಂಬದಿಂದ ಹಣ ಬಂದಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆದರೆ, ಅದಾನಿ ಷೇರುಗಳಲ್ಲಿ ಈ ಇಬ್ಬರು ವಹಿವಾಟು ನಡೆಸಿರುವುದಕ್ಕೆ ಅದಾನಿ ಸಮೂಹದ ಸಹಭಾಗಿತ್ವ ಇದೆ ಎನ್ನಲು ಸಾಕ್ಷ್ಯ ಇದೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಒಸಿಸಿಆರ್‌ಪಿ ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.