ADVERTISEMENT

ಬೆಂಗಳೂರು ಸೇರಿದಂತೆ ದೇಶದ ಏಳು ಪ್ರಮುಖ ನಗರಗಳಲ್ಲಿ ಮನೆ ಬೆಲೆ ಶೇ 11ರಷ್ಟು ಏರಿಕೆ!

ಪಿಟಿಐ
Published 26 ಜೂನ್ 2025, 14:50 IST
Last Updated 26 ಜೂನ್ 2025, 14:50 IST
ಮನೆ
ಮನೆ   

ನವದೆಹಲಿ: ಪ್ರಸಕ್ತ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಬೆಂಗಳೂರು ಸೇರಿದಂತೆ ದೇಶದ ಏಳು ಪ್ರಮುಖ ನಗರಗಳಲ್ಲಿ ಮನೆಗಳ ಸರಾಸರಿ ಬೆಲೆ ವಾರ್ಷಿಕ ಶೇ 11ರಷ್ಟು ಏರಿಕೆಯಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ಸಿದ್ಧಪಡಿಸಿರುವ ವರದಿ ತಿಳಿಸಿದೆ.

ಇದೇ ವೇಳೆ ಮನೆಗಳ ಮಾರಾಟದಲ್ಲಿ ಅಂದಾಜು ಶೇ 20ರಷ್ಟು ಇಳಿಕೆಯಾಗಿದೆ. ಕಳೆದ ವರ್ಷದ ಏಪ್ರಿಲ್‌–ಜೂನ್‌ ಅವಧಿಯಲ್ಲಿ 1.20 ಲಕ್ಷ ಮನೆ ಮಾರಾಟವಾಗಿದ್ದವು. ಈ ಬಾರಿ 96,285 ಮನೆ ಮಾರಾಟವಾಗಿವೆ ಎಂದು ತಿಳಿಸಿದೆ.

ಬೆಂಗಳೂರಲ್ಲಿ ಮನೆ ಬೆಲೆಯು ಶೇ 12ರಷ್ಟು ಹೆಚ್ಚಳವಾಗಿದೆ. ‌ಕಳೆದ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಬೆಂಗಳೂರಲ್ಲಿ 16,355 ಮನೆಗಳು ಮಾರಾಟವಾಗಿದ್ದವು. ಈ ಬಾರಿ 15,120 ಮನೆಗಳು ಮಾರಾಟವಾಗಿವೆ. ಹಿಂದಿನ ವರ್ಷದ ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಮಾರಾಟ ಶೇ 8ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದೆ.

ADVERTISEMENT

ಮನೆಗಳ ಬೆಲೆಯು ದೆಹಲಿ–ಎನ್‌ಸಿಆರ್‌ನಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದು, ಶೇ 27ರಷ್ಟಾಗಿದೆ. ಹೈದರಾಬಾದ್ ಶೇ 11ರಷ್ಟಿದೆ.

ಮನೆಗಳ ಮಾರಾಟವು ಹೈದರಾಬಾದ್ ಮತ್ತು ಪುಣೆ (ಶೇ 27), ಮುಂಬೈ ಮಹಾನಗರ ಪ್ರದೇಶ (ಶೇ 25), ಕೋಲ್ಕತ್ತ (ಶೇ 23) ಮತ್ತು ದೆಹಲಿ–ಎನ್‌ಸಿಆರ್‌ನಲ್ಲಿ ಶೇ 14ರಷ್ಟು ಇಳಿಕೆಯಾಗಿದೆ. ಚೆನ್ನೈನಲ್ಲಿ ಮಾತ್ರ ಶೇ 11ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

‘ಪ್ರಸಕ್ತ ಕ್ಯಾಲೆಂಡರ್ ವರ್ಷದ ಎರಡನೇ ತ್ರೈಮಾಸಿಕವು ದೇಶದ ಮನೆಗಳ ಮಾರುಕಟ್ಟೆಗೆ ಮಹತ್ವದಾಗಿತ್ತು. ಆದರೆ, ದೇಶ ಮತ್ತು ವಿದೇಶಗಳಲ್ಲಿನ ಸೇನಾ ಕಾರ್ಯಾಚರಣೆಗಳು ಮಾರುಕಟ್ಟೆಯ ಮೇಲೆ ಪರಿಣಾಮ ಉಂಟುಮಾಡಿವೆ. ಯುದ್ಧದ ವಾತಾವರಣದಿಂದಾಗಿ ಖರೀದಿದಾರರು ಕಾದು ನೋಡುವ ತಂತ್ರ ಅನುಸರಿಸಿದರು. ಪರಿಣಾಮವಾಗಿ, ಮನೆಗಳ ಬೆಲೆಯು ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಏರಿಕೆ ಕಂಡಿವೆ. ಇದು ಮನೆಗಳ ಬೇಡಿಕೆ ಇಳಿಕೆಗೆ ಕಾರಣವಾಗಿವೆ’ ಎಂದು ಅನರಾಕ್‌ನ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ.

ಆದರೆ, ದೇಶದಲ್ಲಿ ಬಿಕ್ಕಟ್ಟು ತಗ್ಗಿದೆ. ಆರ್‌ಬಿಐ ರೆಪೊ ದರವನ್ನು ಕಡಿತ ಮಾಡಿದೆ. ಇದು ಹೊಸ ಆಶಾವಾದವನ್ನು ಮೂಡಿಸಿದ್ದು, ಮನೆ ಖರೀದಿದಾರರಲ್ಲಿ ಖರೀದಿ ಮಾಡುವ ಉಮೇದನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.