ADVERTISEMENT

ಎನ್‌ಬಿಎಫ್‌ಸಿ ಬಿಕ್ಕಟ್ಟು: ಗೃಹಸಾಲ ನೀಡಿಕೆ ಪ್ರಗತಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 19:26 IST
Last Updated 16 ಜೂನ್ 2019, 19:26 IST
ಗೃಹ ಸಾಲ
ಗೃಹ ಸಾಲ   

ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿ ಗೃಹ ನಿರ್ಮಾಣ ಸಾಲದ ಪ್ರಗತಿಯು ಶೇ 13 ರಿಂದ ಶೇ 15ರ ಮಟ್ಟದಲ್ಲಿ ಇರಲಿದ್ದು, ಇದು ಹಿಂದಿನ ಮೂರು ವರ್ಷಗಳ ಸರಾಸರಿ ಮಟ್ಟಕ್ಕಿಂತ ಕಡಿಮೆ ಇರಲಿದೆ ಎಂದು ವರದಿಯೊಂದು ಎಚ್ಚರಿಸಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಎದುರಿಸುತ್ತಿರುವ ನಗದು ಕೊರತೆ ಬಿಕ್ಕಟ್ಟಿನಿಂದಾಗಿ ಗೃಹ ನಿರ್ಮಾಣ ವಲಯಕ್ಕೆ ನೀಡುವ ಸಾಲದ ಪ್ರಮಾಣದ ಹೆಚ್ಚಳವು ಕಡಿಮೆ ಪ್ರಗತಿ ದಾಖಲಿಸಲಿದೆ. ಇದು 2019ರ ಮಾರ್ಚ್‌ವರೆಗೆ ಬಾಕಿ ಉಳಿದಿರುವ ₹ 19 ಲಕ್ಷ ಕೋಟಿ ಮೊತ್ತದ ಗೃಹ ಸಾಲದ ಮೇಲೇಯೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಇನ್‌ವೆಸ್ಟ್‌ಮೆಂಟ್ ಇನ್‌ಫಾರ್ಮೇಷನ್‌ ಆ್ಯಂಡ್‌ ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ ‘ಇಕ್ರಾ’ದ (ಐಸಿಆರ್‌ಎ) ವರದಿಯಲ್ಲಿ ತಿಳಿಸಲಾಗಿದೆ.

ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಗೃಹ ನಿರ್ಮಾಣ ವಲಯಕ್ಕೆ ಭಾರಿ ಉತ್ತೇಜನ ನೀಡಲು ಬಯಸಿರುವಾಗಲೇ ಈ ವರದಿ ಪ್ರಕಟವಾಗಿದೆ.

ADVERTISEMENT

ಹಲವಾರು ಪ್ರತಿಕೂಲತೆಗಳ ಕಾರಣಕ್ಕೆ 2019–20ನೆ ಹಣಕಾಸು ವರ್ಷದಲ್ಲಿ ಗೃಹ ಸಾಲ ಬೆಳವಣಿಗೆ ದರವು ಹಿಂದಿನ ಮೂರು ವರ್ಷಗಳ ಸರಾಸರಿಯಾಗಿರುವ ಶೇ 17ಕ್ಕಿಂತ ಕಡಿಮೆ ಇರಲಿದೆ. 2017–18ರಲ್ಲಿ ಗೃಹ ಹಣಕಾಸು ಸಂಸ್ಥೆಗಳ ಒಟ್ಟಾರೆ ಸಾಲ ನೀಡಿಕೆ ಪ್ರಮಾಣವು ಶೇ 15ರಷ್ಟು ದಾಖಲಾಗಿದೆ.

ಡಿಎಚ್‌ಎಫ್‌ಎಲ್‌ ಮತ್ತು ರಿಲಯನ್ಸ್‌ ಕ್ಯಾಪಿಟಲ್‌ ಸೇರಿದಂತೆ ಅನೇಕ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಹಿಂದಿನ ವರ್ಷದ ಸೆಪ್ಟೆಂಬರ್‌ನಿಂದಲೇ ನಗದು ಬಿಕ್ಕಟ್ಟು ತೀವ್ರಗೊಂಡಿದೆ. ಇದರಿಂದಾಗಿ ಗೃಹ ಹಣಕಾಸು ಸಂಸ್ಥೆಗಳ ಸಾಲ ನೀಡಿಕೆಯು 2019ರಲ್ಲಿ ಶೇ 10ರಷ್ಟಕ್ಕೆ ಕುಸಿದಿತ್ತು.

ಬ್ಯಾಂಕ್‌ಗಳ ಸಾಧನೆ: ವಾಣಿಜ್ಯ ಬ್ಯಾಂಕ್‌ಗಳ ಸಾಧನೆ ಮಾತ್ರ ಉತ್ತಮವಾಗಿದೆ. ಇವುಗಳ ಗೃಹ ಸಾಲ ವಿತರಣೆಯ ಪ್ರಮಾಣವು ಹಿಂದಿನ ಶೇ 13ಕ್ಕೆ ಹೋಲಿಸಿದರೆ ಶೇ 19ರಷ್ಟಾಗಿದೆ. 2020ನೆ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳ ಗೃಹ ಸಾಲವು ಏರುಗತಿಯಲ್ಲಿ ಇರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಗೃಹ ಹಣಕಾಸು ಸಂಸ್ಥೆಗಳ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣವು ವರ್ಷದ ಹಿಂದೆ ಶೇ 1.1ರಷ್ಟಿದ್ದರೆ, 2019ರ ಮಾರ್ಚ್‌ ವೇಳೆಗೆ ಶೇ 1.5ರಷ್ಟಕ್ಕೆ ಏರಿಕೆಯಾಗಿತ್ತು. ಕೆಲ ರಿಯಲ್‌ ಎಸ್ಟೇಟ್‌ ಸಂಸ್ಥೆಗಳಲ್ಲಿ ಕಂಡು ಬಂದಿರುವ ಹಣದ ಮುಗ್ಗಟ್ಟಿನಿಂದ ‘ಎನ್‌ಪಿಎ’ ಶೇ 1.8ಕ್ಕೆ ಏರಿಕೆಯಾಗಲಿದೆ.

2020ರಲ್ಲಿ ಶೇ 10ರಿಂದ ಶೇ 14ರಷ್ಟು ಪ್ರಗತಿ ಕಾಯ್ದುಕೊಳ್ಳಲು ಗೃಹ ಹಣಕಾಸು ಸಂಸ್ಥೆಗಳಿಗೆ ₹ 4 ಲಕ್ಷ ಕೋಟಿಯಿಂದ ₹ 4.5 ಲಕ್ಷ ಕೋಟಿಯ ಅಗತ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.