ADVERTISEMENT

₹4.51 ಲಕ್ಷ ಕೋಟಿ ಮೌಲ್ಯದ ವಸತಿಗಳ ಹಸ್ತಾಂತರ ವಿಳಂಬ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 16:56 IST
Last Updated 9 ಏಪ್ರಿಲ್ 2019, 16:56 IST
home
home   

ನವದೆಹಲಿ: ಬೆಂಗಳೂರನ್ನೂ ಒಳಗೊಂಡು ಪ್ರಮುಖ ಏಳು ನಗರಗಳಲ್ಲಿ ₹ 4.5 ಲಕ್ಷ ಕೋಟಿ ಮೌಲ್ಯದ 5.6 ಲಕ್ಷ ಮನೆಗಳು ನಿಗದಿತ ಕಾಲಮಿತಿಯೊಳಗೆ ಗ್ರಾಹಕರ ಹಸ್ತಾಂತರವಾಗಿಲ್ಲ ಎಂದು ಆಸ್ತಿ ಸಲಹಾ ಸಂಸ್ಥೆ ಅನಾರ್ಕ್‌ ತಿಳಿಸಿದೆ.

ಬೆಂಗಳೂರು, ರಾಷ್ಟ್ರ ರಾಜದಾನಿ ಪ್ರದೇಶ (ಎನ್‌ಸಿಆರ್‌), ಮುಂಬೈ ಮಹಾನಗರ ಪ್ರದೇಶ, ಚೆನ್ನೈ, ಕೋಲ್ಕತ್ತ, ಹೈದರಾಬಾದ್‌ ಮತ್ತು ಪುಣೆ ನಗರಗಳಲ್ಲಿ 2013ಕ್ಕಿಂತ ಮೊದಲು 5.6 ಲಕ್ಷ ಫ್ಲ್ಯಾಟ್‌ಗಳ ನಿರ್ಮಾಣ ಆರಂಭವನ್ನು ಘೋಷಿಸಲಾಗಿತ್ತು. ಆದರೆ, ಇದುವರೆಗೂ ಇವುಗಳು ಗ್ರಾಹಕರಿಗೆ ಹಸ್ತಾಂತರ ಆಗಿಲ್ಲ. ಇದರಿಂದ ಮುಂಬೈ ಮತ್ತು ಎನ್‌ಸಿಆರ್‌ ನಗರಗಳ ಲಕ್ಷಕ್ಕೂ ಅಧಿಕ ಗ್ರಾಹಕರು ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದ್ದಾರೆ.

‘ಯೋಜನೆ ವಿಳಂಬವಾಗುತ್ತಿರುವುದರಿಂದ ಖರೀದಿದಾರರು ನಿರ್ಮಾಣಗಾರರಿಗೆ ಹಣ ನೀಡುತ್ತಿಲ್ಲ. ಆದರೆ, ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಸಾಕಾಗುವಷ್ಟು ಹಣ ಇಲ್ಲ ಎಂದು ನಿರ್ಮಾಣಗಾರರು ಹೇಳುತ್ತಿದ್ದಾರೆ. ಯೋಜನೆ ವಿಳಂಬವಾದಷ್ಟೂ ವೆಚ್ಚ ಹೆಚ್ಚಾಗುವುದಲ್ಲದೆ, ಹಣದ ಬಿಕ್ಕಟ್ಟು ತೀವ್ರಗೊಳ್ಳಲಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಅನುಜ್‌ ಪುರಿ ತಿಳಿಸಿದ್ದಾರೆ.

ADVERTISEMENT

‘ಅನೇಕ ಕಾರಣಗಳಿಂದಯೋಜನೆಗೆ ಅನುಮತಿ ಸಿಗದೇ ಇರುವುದು ಸಹ ವಿಳಂಬಕ್ಕೆ ಕಾರಣವಾಗುತ್ತಿದೆ. ‘ರೇರಾ‘ ಜಾರಿಗೆ ಬರುವುದಕ್ಕೂ ಮುನ್ನ ಹಲವು ಬಿಲ್ಡರ್‌ಗಳು ಹೊಸ ಯೋಜನೆಗಳನ್ನು ಆರಂಭಿಸಿದ್ದರು. ಆದರೆ, ಅದಕ್ಕೆ ಅಗತ್ಯವಿರುವ ಅನುಮತಿಗಳನ್ನು ಪಡೆದುಕೊಂಡಿರಲಿಲ್ಲ. ಇದರಿಂದಾಗಿ ಇಂತಹ ಯೋಜನೆಗಳು ಅರ್ಧಕ್ಕೆ ನಿಲ್ಲುವಂತಾಗಿದೆ.

‘ಗ್ರಾಹಕರು ನಿರ್ಮಾಣ ಹಂತದಲ್ಲಿರುವ ವಸತಿಗಳನ್ನು ಖರೀದಿಸಲು ಮುಂದಾಗದೇ ಇದ್ದರೆ, ನಿರ್ಮಾಣಗಾರರು ಯೋಜನೆ ಪೂರ್ಣಗೊಳಿಸಲು ಬಾಹ್ಯ ಮೂಲದಿಂದ ಬಂಡವಾಳ ಹೊಂದಿಸಿಕೊಳ್ಳುವುದು ಸವಾಲಾಗಲಿದೆ’ ಎಂದೂ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.