ADVERTISEMENT

ಬೆಲೆ ಏರಿಕೆ,ಆರ್ಥಿಕ ಅನಿಶ್ಚಿತತೆಯಿಂದ ಮನೆಮಾರಾಟ ಶೇ14ರಷ್ಟು ಇಳಿಕೆ: ಅನರಾಕ್ ವರದಿ

ಮನೆಗಳ ಬೆಲೆ ಏರಿಕೆ, ಆರ್ಥಿಕ ಅನಿಶ್ಚಿತತೆ ಇಳಿಕೆಗೆ ಕಾರಣ: ಅನರಾಕ್ ವರದಿ

ಪಿಟಿಐ
Published 26 ಡಿಸೆಂಬರ್ 2025, 14:29 IST
Last Updated 26 ಡಿಸೆಂಬರ್ 2025, 14:29 IST
ಮನೆ
ಮನೆ   

ನವದೆಹಲಿ: ಪ್ರಸಕ್ತ ವರ್ಷದ ಇದುವರೆಗೆ ದೇಶದ ಏಳು ಪ್ರಮುಖ ನಗರಗಳಲ್ಲಿ ಮನೆಗಳ ಮಾರಾಟದಲ್ಲಿ ಶೇ 14ರಷ್ಟು ಇಳಿಕೆ ಆಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ಸಿದ್ಧಪಡಿಸಿರುವ ವರದಿ ಶುಕ್ರವಾರ ಹೇಳಿದೆ.

2024ರಲ್ಲಿ ದೇಶದಲ್ಲಿ 4,59,645 ಮನೆಗಳು ಮಾರಾಟವಾಗಿದ್ದವು. ಈ ವರ್ಷ 3,95,625 ಮನೆಗಳು ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇಳಿಕೆಯಾಗಿದೆ. 

ಕಳೆದ ವರ್ಷ ಮಾರಾಟವಾದ ಮನೆಗಳು ಹಣಕಾಸಿನ ಮೌಲ್ಯದಲ್ಲಿ ₹5.68 ಲಕ್ಷ ಕೋಟಿಯಷ್ಟಾಗಿತ್ತು. ಈ ಬಾರಿ ಶೇ 6ರಷ್ಟು ಹೆಚ್ಚಳವಾಗಿ, ₹6 ಲಕ್ಷ ಕೋಟಿಯಾಗಿದೆ. ದೇಶದ ಏಳು ಪ್ರಮುಖ ನಗರಗಳನ್ನು ಒಟ್ಟಾರೆಯಾಗಿ ಪರಿಗಣಿಸಿದಾಗ ವಸತಿ ಆಸ್ತಿಗಳ ಬೆಲೆಯು ಶೇ 8ರಷ್ಟು ಹೆಚ್ಚಳ ಕಂಡಿದೆ.

ADVERTISEMENT

‘ವಸತಿ ಆಸ್ತಿಗಳ ಬೆಲೆಯಲ್ಲಿ ಏರಿಕೆ, ಮಾಹಿತಿ ತಂತ್ರಜ್ಞಾನದ ವಲಯದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿರುವುದು, ಅಮೆರಿಕದ ಹೆಚ್ಚುವರಿ ಸುಂಕವು, ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಮತ್ತು ಇತರೆ ಆರ್ಥಿಕ ಅನಿಶ್ಚಿತತೆಯು ಮನೆಗಳ ಮಾರಾಟದ ಇಳಿಕೆಗೆ ಕಾರಣ ಆಗಿದೆ’ ಎಂದು ಅನರಾಕ್‌ನ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ.

ಮುಂಬೈ ಮಹಾನಗರ ಪ್ರದೇಶ (ಎಂಎಂಆರ್), ದೆಹಲಿ–ಎನ್‌ಸಿಆರ್, ಬೆಂಗಳೂರು, ಪುಣೆ, ಕೋಲ್ಕತ್ತ ಮತ್ತು ಹೈದರಾಬಾದ್‌ನಲ್ಲಿ ಮನೆಗಳ ಮಾರಾಟದಲ್ಲಿ ಕಡಿಮೆ ಆಗಿದೆ. ಆದರೆ, ಚೆನ್ನೈನಲ್ಲಿ ಮಾತ್ರ ಮನೆಗಳಿಗೆ ಬೇಡಿಕೆ ಹೆಚ್ಚಳವಾಗಿದೆ.

ಹೈದರಾಬಾದ್‌ನಲ್ಲಿ ಮನೆಗಳ ಮಾರಾಟದಲ್ಲಿ ಶೇ 23ರಷ್ಟು ಇಳಿಕೆಯಾಗಿದ್ದು, 44,885 ಮನೆಗಳು ಮಾರಾಟವಾಗಿವೆ. ಕಳೆದ ವರ್ಷ 58,540 ಮನೆಗಳು ಮಾರಾಟವಾಗಿದ್ದವು. ಪುಣೆಯಲ್ಲಿ ಶೇ 20ರಷ್ಟು (65,135), ಮುಂಬೈ ಮಹಾನಗರ ಪ್ರದೇಶದಲ್ಲಿ ಶೇ 18ರಷ್ಟು (1,27,875), ಕೋಲ್ಕತ್ತ ಶೇ 12ರಷ್ಟು (16,125) ದೆಹಲಿ–ಎನ್‌ಸಿಆರ್‌ ಶೇ 8ರಷ್ಟು (57,220) ಮನೆಗಳ ಮಾರಾಟದಲ್ಲಿ ಕಡಿಮೆ ಆಗಿದ್ದರೆ, ಬೆಂಗಳೂರಿನಲ್ಲಿ ಮನೆಗಳ ಮಾರಾಟದಲ್ಲಿ ಶೇ 5ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ 65,225 ಮನೆಗಳು ಮಾರಾಟವಾಗಿದ್ದವು. ಈ ಬಾರಿ 62,205 ಮನೆಗಳು ಮಾರಾಟವಾಗಿವೆ.

ಆದರೆ, ಚೆನ್ನೈನಲ್ಲಿ ಮನೆಗಳ ಮಾರಾಟದಲ್ಲಿ ಶೇ 15ರಷ್ಟು ಏರಿಕೆಯಾಗಿ, 22,180 ಮನೆಗಳು ಮಾರಾಟವಾಗಿವೆ. ವಸತಿ ಆಸ್ತಿಗಳ ಸರಾಸರಿ ಬೆಲೆಯು ಕಳೆದ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಪ್ರತಿ ಚದರ ಅಡಿಗೆ ₹8,590 ಇತ್ತು. ಅದು ಈ ಬಾರಿ ಶೇ 8ರಷ್ಟು ಹೆಚ್ಚಳವಾಗಿ, ₹9,260ಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

2026ರಲ್ಲಿ ಮನೆಗಳ ಮಾರಾಟವು ರೆಪೊ ದರ ಇಳಿಕೆ ಮತ್ತು ಮನೆಗಳ ಬೆಲೆಯನ್ನು ಅವಲಂಬಿಸಿ ಇರಲಿದೆ
ಅನುಜ್ ಪುರಿ ಅಧ್ಯಕ್ಷ ಅನರಾಕ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.