
ಹಣಕಾಸು ಕಂಪನಿಗಳು ಒದಗಿಸುವ ಸೇವೆಗಳಲ್ಲಿ ಲೋಪಗಳು ಇದ್ದರೆ, ಅದರ ಬಗ್ಗೆ ದೂರು ದಾಖಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಡಿಯಲ್ಲಿ ಒಂಬುಡ್ಸ್‌ಮನ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ವ್ಯವಸ್ಥೆಯಲ್ಲಿ ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಯಿಂದ ಬಾಕಿ ಇರುವ ದೂರುಗಳನ್ನು ಇತ್ಯರ್ಥಪಡಿಸಲು ಆರ್‌ಬಿಐ ಅಭಿಯಾನವೊಂದನ್ನು ಜನವರಿಯಿಂದ ಆರಂಭಿಸಲಿದೆ. ಎರಡು ತಿಂಗಳು ಈ ಅಭಿಯಾನ ನಡೆಯಲಿದೆ.
ಈ ಹೊತ್ತಿನಲ್ಲಿ ಒಂಬುಡ್ಸ್‌ಮನ್ ವ್ಯವಸ್ಥೆ ಅಂದರೆ ಏನು, ಅದು ಯಾವ ಬಗೆಯ ದೂರುಗಳನ್ನು ಇತ್ಯರ್ಥಪಡಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತವಾಗಬಹುದು.
ಆರ್‌ಬಿಐ ನೋಂದಾಯಿತ ಹಣಕಾಸಿನ ಕಂಪನಿಗಳ ‘ಸೇವೆಗಳಲ್ಲಿ ಲೋಪ’ಗಳ ವಿಚಾರವಾಗಿ ಒಂಬುಡ್ಸ್‌ಮನ್ ವ್ಯವಸ್ಥೆಗೆ ದೂರು ಸಲ್ಲಿಸಬಹುದು. ‘ನೋಂದಾಯಿತ ಕಂಪನಿಯು ಒದಗಿಸಬೇಕಿರುವ ಯಾವುದೇ ಹಣಕಾಸಿನ ಸೇವೆಯಲ್ಲಿನ ಕೊರತೆ ಅಥವಾ ಅಸಮರ್ಪಕ ಸೇವೆಯು ದೂರು ನೀಡುವುದಕ್ಕೆ ಅರ್ಹವಾಗುತ್ತದೆ’ ಎಂದು ಆರ್‌ಬಿಐ ವ್ಯಾಖ್ಯಾನಿಸಿದೆ.
ಆದರೆ, ಸೇವೆಯು ಸಮರ್ಪಕವಾಗಿ ದೊರೆತಿಲ್ಲ ಎಂದಾದರೆ ಅದರ ಕುರಿತ ದೂರನ್ನು ಮೊದಲ ಹಂತದಲ್ಲೇ ಒಂಬುಡ್ಸ್‌ಮನ್‌ಗೆ ಸಲ್ಲಿಸಬಾರದು ಎಂದು ಕೂಡ ಆರ್‌ಬಿಐ ಹೇಳಿದೆ.
ಸೇವೆಗಳು ಸರಿಯಾಗಿ ಸಿಕ್ಕಿಲ್ಲ ಎಂದಾದರೆ ವ್ಯಕ್ತಿಯು ಮೊದಲಿಗೆ ದೂರನ್ನು ಸಂಬಂಧಪಟ್ಟ ಹಣಕಾಸಿನ ಕಂಪನಿಗೆ ಸಲ್ಲಿಸಬೇಕು. ದೂರನ್ನು ಸ್ವೀಕರಿಸಿದ ಆ ಕಂಪನಿಯು 30 ದಿನಗಳಲ್ಲಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ, ಕಂಪನಿಯು ಆ ದೂರನ್ನು ಪೂರ್ತಿಯಾಗಿ ಅಥವಾ ದೂರಿನ ಒಂದಿಷ್ಟು ಅಂಶಗಳನ್ನು ತಿರಸ್ಕರಿಸಿದರೆ, ಕಂಪನಿಯು ತೆಗೆದುಕೊಂಡ ಪರಿಹಾರ ಕ್ರಮವು ದೂರುದಾರ ವ್ಯಕ್ತಿಗೆ ಸಮಾಧಾನ ನೀಡದೆ ಇದ್ದರೆ ಒಂಬುಡ್ಸ್‌ಮನ್‌ಗೆ ದೂರು ದಾಖಲಿಸಬಹುದು.
ದೂರನ್ನು ಮೊದಲು ಸಂಬಂಧಪಟ್ಟ ಹಣಕಾಸಿನ ಕಂಪನಿಗೆ ಸಲ್ಲಿಸದೆ ಅಥವಾ ಹಣಕಾಸು ಕಂಪನಿಗೆ ದೂರು ಸಲ್ಲಿಸಿದ 30 ದಿನಗಳು ಕಳೆಯುವ ಮೊದಲೇ ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸಿದರೆ ಅದು ಪರಿಗಣನೆಗೆ ಯೋಗ್ಯವಾಗುವುದಿಲ್ಲ.
ದೂರು ಸಲ್ಲಿಸುವುದು ಹೇಗೆ?: ಅಂಚೆಯ ಮೂಲಕವೂ ದೂರನ್ನು ಸಲ್ಲಿಸಬಹುದು. ಆದರೆ ಆನ್‌ಲೈನ್ ಮೂಲಕ ದೂರು ಸಲ್ಲಿಸುವಿಕೆ ಸುಲಭ ಎಂಬುದು ಹಲವರ ಅಭಿಪ್ರಾಯ. ದೂರು ಸ್ವೀಕರಿಸಲಿಕ್ಕೆಂದು cms.rbi.org.in ವಿಳಾಸದ ಪೋರ್ಟಲ್ ರೂಪಿಸಲಾಗಿದೆ.
ದೂರು ಸಲ್ಲಿಸುವ ವ್ಯಕ್ತಿಯು ಕೆಲವು ವಿವರಗಳನ್ನು ಅಗತ್ಯವಾಗಿ ಒದಗಿಸಬೇಕು. ಹೆಸರು, ಲಿಂಗ ಮತ್ತು ವಯಸ್ಸು ನಮೂದಿಸಬೇಕು. ದೂರುದಾರನ ಪೂರ್ಣ ಅಂಚೆ ವಿಳಾಸ, ಇ–ಮೇಲ್ ವಿಳಾಸ, ಮೊಬೈಲ್ ದೂರವಾಣಿ ಸಂಖ್ಯೆ ನೀಡಬೇಕು.
ಯಾವ ಕಂಪನಿಯ ವಿರುದ್ಧ ದೂರು ನೀಡಲಾಗುತ್ತಿದೆಯೋ ಆ ಕಂಪನಿಯ ಹೆಸರು ಮತ್ತು ಶಾಖೆಯ ವಿಳಾಸ, ದೂರು ನೀಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದ್ದುದರ ಸಂಪೂರ್ಣ ವಿವರ, ವಹಿವಾಟಿನ ವಿವರಗಳು, ದೂರುದಾರ ವ್ಯಕ್ತಿಯ ಖಾತೆ ಸಂಖ್ಯೆ, ದೂರಿಗೆ ಅಗತ್ಯವಿದ್ದಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಒದಗಿಸಬೇಕು.
ಹಣಕಾಸಿನ ಕಂಪನಿಗೆ ಮೊದಲು ಸಲ್ಲಿಸಿದ್ದ ದೂರಿನ ವಿವರಗಳನ್ನು ನೀಡಬೇಕು, ಅಲ್ಲಿಂದ ದೊರೆತ ಪ್ರತಿಕ್ರಿಯೆಯ ಬಗ್ಗೆಯೂ ಉಲ್ಲೇಖಿಸಬೇಕು. ದೂರು ದಾಖಲಿಸಿದ ನಂತರದಲ್ಲಿ ಅದರ ಸ್ಥಿತಿಗತಿಯ ಬಗ್ಗೆ ಪೋರ್ಟಲ್ ಮೂಲಕವೇ ವಿವರ ಪಡೆದುಕೊಳ್ಳಬಹುದು.
(ಆಧಾರ: ಆರ್‌ಬಿಐ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.