ನವದೆಹಲಿ: ‘ಬೈಜುಸ್ ಕಂಪನಿಯ ಲೆಕ್ಕ ಪರಿಶೋಧನೆಯಲ್ಲಿ ಕಂಡುಬಂದಿರುವ ಲೋಪ ಕುರಿತಂತೆ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ (ಐಸಿಎಐ) ಶಿಸ್ತು ಸಮಿತಿಯಿಂದ ತನಿಖೆ ನಡೆಯುತ್ತಿದೆ’ ಎಂದು ಸಂಸ್ಥೆಯ ಅಧ್ಯಕ್ಷ ರಂಜೀತ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಸ್ಥೆಯು ಶಿಸ್ತುಪಾಲನೆಗೆ ಸಂಬಂಧಿಸಿದಂತೆ ವಿವಿಧ ಹಂತದ ಕಾರ್ಯವಿಧಾನವನ್ನು ಹೊಂದಿದೆ’ ಎಂದರು.
ಲೆಕ್ಕ ಪರಿಶೋಧನೆಯಲ್ಲಿ ಕಂಡುಬರುವ ಲೋಪದ ವಿಷಯವನ್ನು ಮುಕ್ತಾಯಗೊಳಿಸುವ ಅಥವಾ ತನಿಖೆ ನಡೆಸಲು ಶಿಸ್ತು ಸಮಿತಿಗೆ ಒಪ್ಪಿಸುವ ಅಧಿಕಾರವನ್ನು ಸಂಸ್ಥೆಯ ಶಿಸ್ತು ನಿರ್ದೇಶನಾಲಯ ಹೊಂದಿದೆ. ಹಾಗಾಗಿ, ಬೈಜುಸ್ ಪ್ರಕರಣವನ್ನು ಶಿಸ್ತು ಸಮಿತಿಗೆ ಒಪ್ಪಿಸಿದೆ ಎಂದು ತಿಳಿಸಿದರು.
ಮೇಲ್ನೋಟಕ್ಕೆ ಕಂಡುಬಂದಿರುವ ಲೋಪದ ಬಗ್ಗೆ ಅವರು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿಲ್ಲ.
ಬೈಜುಸ್ ಬಹಿರಂಗಪಡಿಸಿದ್ದ ಹಣಕಾಸಿನ ಮಾಹಿತಿಗಳಲ್ಲಿ ಆ ಕಂಪನಿಯ ಲೆಕ್ಕ ಪರಿಶೋಧಕರು ನಿರ್ಲಕ್ಷ್ಯ ಎಸಗಿರುವುದು ಕಂಡುಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಹಣಕಾಸು ವರದಿ ಪರಿಶೀಲನಾ ಮಂಡಳಿಯು (ಎಫ್‌ಆರ್‌ಆರ್‌ಬಿ) ಐಸಿಎಐನ ಶಿಸ್ತು ನಿರ್ದೇಶನಾಲಯಕ್ಕೆ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.