ADVERTISEMENT

ಕೋವಿಡ್‌ ಎರಡನೆಯ ಅಲೆಯ ಪರಿಣಾಮ ಸೌಮ್ಯ: ಕೇಂದ್ರ ಹಣಕಾಸು ಸಚಿವಾಲಯ

ಪಿಟಿಐ
Published 7 ಮೇ 2021, 14:54 IST
Last Updated 7 ಮೇ 2021, 14:54 IST
   

ನವದೆಹಲಿ: ಕೋವಿಡ್–19ರ ಎರಡನೆಯ ಅಲೆಯು ಅರ್ಥ ವ್ಯವಸ್ಥೆಯ ಮೇಲೆ ಬೀರಲಿರುವ ಪರಿಣಾಮವು, ಮೊದಲ ಅಲೆ ಬೀರಿದಷ್ಟು ತೀವ್ರವಾಗಿರುವ ಸಾಧ್ಯತೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯವು ತನ್ನ ಮಾಸಿಕ ವರದಿಯಲ್ಲಿ ಹೇಳಿದೆ.

ಹಾಲಿ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಕುಸಿತ ಕಾಣುವ ಅಪಾಯವನ್ನು ಎರಡನೆಯ ಅಲೆಯು ತಂದಿತ್ತಿದೆ ಎಂಬುದನ್ನು ವರದಿಯು ಉಲ್ಲೇಖಿಸಿದೆ. ‘ಎರಡನೆಯ ಅಲೆಯ ಪರಿಣಾಮವು ಹಿಂದಿನಂತೆ ತೀವ್ರವಾಗಿ ಇರುವುದಿಲ್ಲ ಎಂದು ಭಾವಿಸಲು ಕಾರಣಗಳು ಇವೆ. ಕೋವಿಡ್–19ರ ನಡುವೆಯೂ ಕಾರ್ಯ ನಿರ್ವಹಿಸಲು ಕಲಿಯುವುದು ಆಸೆಯ ಬೆಳ್ಳಿ ರೇಖೆಯೊಂದನ್ನು ಮೂಡಿಸಿದೆ’ ಎಂದು ವರದಿ ಹೇಳಿದೆ.

2020–21ನೇ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಕಂಡ ಪರಿಣಾಮವಾಗಿ ಕೇಂದ್ರ ಸರ್ಕಾರದ ಆರ್ಥಿಕ ಸ್ಥಿತಿಯು ಈಚಿನ ತಿಂಗಳುಗಳಲ್ಲಿ ಉತ್ತಮಗೊಂಡಿದೆ ಎಂದು ವರದಿ ಹೇಳಿದೆ.

ADVERTISEMENT

ತಾತ್ಕಾಲಿಕ ಅಂಕಿ–ಅಂಶಗಳ ಪ್ರಕಾರ ನೇರ ತೆರಿಗೆಯ ನಿವ್ವಳ ಸಂಗ್ರಹವು 2020–21ರಲ್ಲಿ ಪರಿಷ್ಕೃತ ಅಂದಾಜಿಗಿಂತ ಶೇಕಡ 4.5ರಷ್ಟು ಹೆಚ್ಚಾಗಿದೆ. 2019–20ರಲ್ಲಿ ಆಗಿದ್ದ ಸಂಗ್ರಹಕ್ಕಿಂತ ಶೇ 5ರಷ್ಟು ಜಾಸ್ತಿ ಆಗಿದೆ. 2019–20ರಲ್ಲಿ ಆದ ಸಂಗ್ರಹಕ್ಕಿಂತ ಗಣನೀಯ ಹೆಚ್ಚಳ ತೆರಿಗೆ ಸಂಗ್ರಹದಲ್ಲಿ ಆಗಿರುವುದು, ಕೊರೊನಾ ಮೊದಲ ಅಲೆಯ ನಂತರ ಆರ್ಥಿಕ ಚೇತರಿಕೆ ಕಂಡುಬಂದಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕಳೆದ ಆರು ತಿಂಗಳುಗಳಲ್ಲಿ ಪ್ರತಿ ತಿಂಗಳೂ ಜಿಎಸ್‌ಟಿ ಸಂಗ್ರಹ ಮೊತ್ತವು ₹ 1 ಲಕ್ಷ ಕೋಟಿಗಿಂತ ಜಾಸ್ತಿ ಇದೆ. ಏಪ್ರಿಲ್‌ನಲ್ಲಿ ದಾಖಲೆಯ ₹ 1.41 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ ಆಗಿರುವುದು ಆರ್ಥಿಕ ಪುನಶ್ಚೇತನ ತಡೆಯಿಲ್ಲದೆ ಆಗುತ್ತಿದೆ ಎಂಬುದನ್ನು ಹೇಳುತ್ತಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.