ನವದೆಹಲಿ: ಬ್ರಿಟನ್ನಿನಿಂದ ಆಗುವ ಆಮದು ಇದ್ದಕ್ಕಿದ್ದಂತೆ ಹೆಚ್ಚಳ ಕಂಡು, ದೇಶದ ಕೈಗಾರಿಕೆಗಳಿಗೆ ಅದರಿಂದ ಧಕ್ಕೆ ಆದಲ್ಲಿ, ತಾತ್ಕಾಲಿಕವಾಗಿ ಆಮದು ಸುಂಕ ಹೆಚ್ಚು ಮಾಡಲು ಭಾರತಕ್ಕೆ ಅವಕಾಶ ಇದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ಶನಿವಾರ ತಿಳಿಸಿದೆ.
ತಾತ್ಕಾಲಿಕವಾಗಿ ಸುಂಕವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಕೆಲವು ವಿನಾಯಿತಿಗಳನ್ನು ಅಮಾನತಿನಲ್ಲಿ ಇರಿಸಲಿಕ್ಕೂ ಅವಕಾಶ ಇದೆ ಎಂದು ಸಚಿವಾಲಯ ಹೇಳಿದೆ. ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಗಿದೆ.
‘ಮುಕ್ತ ವ್ಯಾಪಾರ ಒಪ್ಪಂದದಲ್ಲಿ ದ್ವಿಪಕ್ಷೀಯ ಸುರಕ್ಷತಾ ಕ್ರಮಗಳು ಇವೆ. ಈ ಕ್ರಮಗಳ ಅಡಿಯಲ್ಲಿ, ಬ್ರಿಟನ್ನಿನಿಂದ ಆಗುವ ಆಮದು ಗಣನೀಯವಾಗಿ ದಿಢೀರ್ ಹೆಚ್ಚಳವಾಗಿ ಭಾರತದ ಕೈಗಾರಿಕೆಗಳಿಗೆ ಗಂಭೀರ ಅಪಾಯ ಎದುರಾದರೆ ನಿರ್ದಿಷ್ಟ ಸರಕುಗಳ ಮೇಲೆ ತಾತ್ಕಾಲಿಕವಾಗಿ ತೆರಿಗೆ ಹೆಚ್ಚು ಮಾಡುವುದಕ್ಕೆ ಅಥವಾ ತೆರಿಗೆ ವಿನಾಯಿತಿಯನ್ನು ಅಮಾನತಿನಲ್ಲಿ ಇರಿಸುವುದಕ್ಕೆ ಭಾರತಕ್ಕೆ ಅವಕಾಶ ಇದೆ’ ಎಂದು ಸಚಿವಾಲಯ ಹೇಳಿದೆ.
ಒಪ್ಪಂದದ ಅಡಿಯಲ್ಲಿ ಆರಂಭಿಕವಾಗಿ, ಈ ಸುರಕ್ಷತಾ ಕ್ರಮಗಳು ಗರಿಷ್ಠ ಎರಡು ವರ್ಷಗಳ ಅವಧಿಯನ್ನು ಹೊಂದಿವೆ. ಸುರಕ್ಷತಾ ಕ್ರಮಗಳ ಅಗತ್ಯವು ಇನ್ನೂ ಇದೆ ಎಂಬುದು ತನಿಖೆಯಿಂದ ಗೊತ್ತಾದರೆ ಕ್ರಮಗಳನ್ನು ಹೆಚ್ಚುವರಿಯಾಗಿ ಎರಡು ವರ್ಷಗಳವರೆಗೆ ವಿಸ್ತರಿಸಿಕೊಳ್ಳಲು ಕೂಡ ಅವಕಾಶ ಇದೆ.
ಅಲ್ಲದೆ, ಸುರಕ್ಷತಾ ಕ್ರಮಗಳನ್ನು ಎರಡು ವರ್ಷಗಳ ಅವಧಿಗೆ ಮಾತ್ರವೇ ಅನುಷ್ಠಾನಕ್ಕೆ ತಂದರೆ ಭಾರತಕ್ಕಾಗಲಿ ಬ್ರಿಟನ್‌ಗಾಗಲಿ ಪ್ರತೀಕಾರ ಕ್ರಮ ಕೈಗೊಳ್ಳಲು ಅವಕಾಶ ಇರುವುದಿಲ್ಲ. ನಾಲ್ಕು ವರ್ಷಗಳಿಗೆ ಕ್ರಮಗಳನ್ನು ವಿಸ್ತರಿಸಿದಲ್ಲಿ, ಪ್ರತೀಕಾರ ಕ್ರಮ ಕೈಗೊಳ್ಳಲು ಅವಕಾಶ ಇರಲಿದೆ.
‘ಸೂಕ್ಷ್ಮ ವಲಯ ರಕ್ಷಿಸಲಾಗಿದೆ’
ಬ್ರಿಟನ್ ಜೊತೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಭಾರತವು ತನ್ನ ಹೈನುಗಾರಿಕೆ, ಅಕ್ಕಿ ಮತ್ತು ಸಕ್ಕರೆ ವಲಯಗಳು ಸೇರಿದಂತೆ ಎಲ್ಲ ಸೂಕ್ಷ್ಮ ವಲಯಗಳನ್ನು ರಕ್ಷಿಸಿಕೊಂಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
‘ದೇಶದ ಎಲ್ಲ ಸೂಕ್ಷ್ಮ ವಲಯಗಳನ್ನು ನಾವು ಕಾಪಾಡಿಕೊಂಡಿದ್ದೇವೆ, ಅವುಗಳನ್ನು ಬ್ರಿಟನ್ನಿನ ಉತ್ಪನ್ನಗಳಿಗೆ ಮುಕ್ತವಾಗಿಸಿಲ್ಲ. ಯಾವುದೇ ಹೊಂದಾಣಿಕೆಗಳು ಇಲ್ಲದ ಹಾಗೂ ವ್ಯಾಪಕವಾದ ಪ್ರಯೋಜನಗಳನ್ನು ಹೊಂದಿರುವ ಇದು ಅಸಾಮಾನ್ಯ ಒಪ್ಪಂದ’ ಎಂದು ಅವರು ಹೇಳಿದ್ದಾರೆ.
ಬ್ರಿಟನ್ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದವು ಅಭಿವೃದ್ಧಿ ಹೊಂದಿದ ಜಗತ್ತಿಗೆ ಪ್ರವೇಶಿಸಲು ಭಾರತಕ್ಕೆ ಬಾಗಿಲು ತೆರೆದುಕೊಡುತ್ತದೆ.
– ಪೀಯೂಷ್ ಗೋಯಲ್ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.