ADVERTISEMENT

ಉಕ್ಕು ಆಮದು; ಹೆಚ್ಚುವರಿ ಸುಂಕ ಬೇಡ: ರಾಲ್ಹಾನ್‌

ಪಿಟಿಐ
Published 3 ಡಿಸೆಂಬರ್ 2024, 13:36 IST
Last Updated 3 ಡಿಸೆಂಬರ್ 2024, 13:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಉಕ್ಕಿನ ಆಮದು ಮೇಲೆ ಹೆಚ್ಚುವರಿ ಸುಂಕ ವಿಧಿಸಿದರೆ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಯ (ಎಂಎಸ್‌ಎಂಇ) ಉತ್ಪನ್ನಗಳ ರಫ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಹ್ಯಾಂಡ್‌ ಟೂಲ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ಸಿ.ರಾಲ್ಹಾನ್‌ ಮಂಗಳವಾರ ಹೇಳಿದ್ದಾರೆ.

ಸರ್ಕಾರವು ಶೇ 25ರಷ್ಟು ಭದ್ರತಾ ಸುಂಕವನ್ನು ವಿಧಿಸಲು ಯೋಜಿಸಿದೆ. ಈಗಾಗಲೇ ಎಂಎಸ್‌ಎಂಇ ವಲಯದ ಎಂಜಿನಿಯರಿಂಗ್ ವಸ್ತುಗಳ ರಫ್ತುದಾರರು ಬಂಡವಾಳ, ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಉಕ್ಕಿನ ದರ ಸೇರಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸುಂಕದ ಹೆಚ್ಚಳವು ರಫ್ತು ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಒಂದು ವೇಳೆ ಸರ್ಕಾರ ಹೆಚ್ಚುವರಿ ಸುಂಕವನ್ನು ವಿಧಿಸಿದರೆ, ದೇಶೀಯ ಉಕ್ಕು ಕಂಪನಿಗಳು ಉಕ್ಕು ಬೆಲೆಯನ್ನು ಹೆಚ್ಚಿಸದಂತೆ ನೋಡಿಕೊಳ್ಳಬೇಕು ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ (ಎಫ್‌ಐಇಒ) ಮಹಾನಿರ್ದೇಶಕ ಅಜಯ್ ಸಹಾಯ್ ಹೇಳಿದ್ದಾರೆ.

ADVERTISEMENT

ಚೀನಾದಂತಹ ಆಯ್ದ ರಾಷ್ಟ್ರಗಳಿಂದ ಅಗ್ಗದ ಉಕ್ಕಿನ ಆಮದು ಹೆಚ್ಚುತ್ತಿದೆ. ಈ ಬಗ್ಗೆ ದೇಶೀಯ ಉಕ್ಕು ಕಂಪನಿಗಳು ಕಳವಳ ವ್ಯಕ್ತಪಡಿಸುತ್ತಿವೆ ಎಂದು ಹೇಳಿದ್ದಾರೆ.

ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಅವರನ್ನು ಸೋಮವಾರ ಭೇಟಿಯಾಗಿದ್ದಾರೆ. ಈ ವೇಳೆ ದೇಶಕ್ಕೆ ಆಮದಾಗುವ ಉಕ್ಕಿನ ನಿರ್ದಿಷ್ಟ ವಸ್ತುಗಳ ಮೇಲೆ ಶೇ 25ರಷ್ಟು ಭದ್ರತಾ ಸುಂಕ ವಿಧಿಸುವ ಕುರಿತು ಪ್ರಸ್ತಾವ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.