ADVERTISEMENT

ಹೂಡಿಕೆದಾರರ ಮಾಹಿತಿ ಕೊಡಿ: ನವೋದ್ಯಮಗಳಿಗೆ ಐಟಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 15:42 IST
Last Updated 9 ಸೆಪ್ಟೆಂಬರ್ 2023, 15:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ನವೋದ್ಯಮಗಳಲ್ಲಿ ಬಂಡವಾಳ ತೊಡಗಿಸುವ ಹೂಡಿಕೆದಾರರ ಸಾಲ ಮಾರುಪಾವತಿಸುವ ಸಾಮರ್ಥ್ಯದ ಕುರಿತು ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯು ಕೆಲವು ನವೋದ್ಯಮಗಳಿಗೆ ನೋಟಿಸ್ ನೀಡಿದೆ. ಹೂಡಿಕೆದಾರನೊಬ್ಬ ನವೋದ್ಯಮದಲ್ಲಿ ತೊಡಗಿಸಿರುವ ಬಂಡವಾಳವು ಆತನು ಘೋಷಣೆ ಮಾಡಿಕೊಂಡಿರುವ ಆದಾಯಕ್ಕೆ ಅನುಗುಣವಾಗಿ ಇದೆಯೇ ಎನ್ನುವುದನ್ನು ಪರಿಶೀಲಿಸುವ ಉದ್ದೇಶದಿಂದ ಇಲಾಖೆಯು ಈ ಕ್ರಮ ಕೈಗೊಂಡಿದೆ.

ಹೂಡಿಕೆದಾರರ ಗುರುತು ಮತ್ತು ಸಾಲದ ಅರ್ಹತೆ ಹಾಗೂ ವಹಿವಾಟಿನ ಸಾಚಾತನವನ್ನು ಸಾಬೀತುಪಡಿಸುವ ಜವಾಬ್ದಾರಿಯು ತೆರಿಗೆ ಪಾವತಿಸುವ ಕಂಪನಿಯಯದ್ದಾಗಿದೆ ಎಂದು ತೆರಿಗೆ ಇಲಾಖೆಯು ಭಾರತ್‌ಪೆ ಸಹಸ್ಥಾಪಕ ಮತ್ತು ಮಾಜಿ ಎಂ.ಡಿ. ಅಶ್ನೀರ್‌ ಗ್ರೋವರ್‌ ಅವರು ‘ಎಕ್ಸ್‌’ನಲ್ಲಿ ಮಾಡಿರುವ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದೆ.

‘ಷೇರುದಾರರ ಮಾಹಿತಿ ಒದಗಿಸುವಂತೆ ಕಳೆದ ಒಂದು ತಿಂಗಳಿನಲ್ಲಿ ಹಲವು ನವೋದ್ಯಮಗಳಿಗೆ (ನಾನು ಹೂಡಿಕೆ ಮಾಡಿರುವ ಕೆಲವನ್ನೂ ಒಳಗೊಂಡು) ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ಬಂದಿದೆ’ ಎಂದು ಗ್ರೋವರ್‌ ಅವರು ಶುಕ್ರವಾರ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. ‘ಸ್ವಾರಸ್ಯಕರ ವಿಷಯ ಎಂದರೆ, ಎಲ್ಲ ಷೇರುದಾರರ ಮೂರು ವರ್ಷಗಳ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ (ಐಟಿಆರ್‌) ಮಾಹಿತಿ ನೀಡುವಂತೆ ನವೋದ್ಯಮ ಕಂಪನಿಗಳನ್ನು ಕೇಳಲಾಗಿದೆ’ ಎಂದು ಬರೆದಿದ್ದಾರೆ.

ADVERTISEMENT

ಷೇರುದಾರರ ಐಟಿಆರ್‌ ಅನ್ನು ನವೋದ್ಯಮಗಳು ಹೇಗೆ ಮತ್ತು ಏಕೆ ಹೊಂದಿರಬೇಕು ಎಂದು ಗ್ರೋವರ್‌ ಪ್ರಶ್ನೆ ಮಾಡಿದ್ದಾರೆ. ‘ಷೇರುದಾರ/ವ್ಯಕ್ತಿಯೊಬ್ಬ ತನ್ನ ಐಟಿಆರ್ ಅನ್ನು ಖಾಸಗಿ ಕಂಪನಿಯೊಂದಿಗೆ ಏಕೆ ಹಂಚಿಕೊಳ್ಳುತ್ತಾನೆ’ ಎಂದು ಪ್ರಶ್ನಿಸಿದ್ದಾರೆ.

ಹೂಡಿಕೆದಾರರ ಸಾಲ ಯೋಗ್ಯತೆ ಪ್ರಮಾಣೀಕರಿಸಲು ವಿವರಗಳನ್ನು ಕೇಳಿರುವುದಾಗಿ ತಿಳಿಸಲಾಗಿದೆ. ಅದು ಏಕೆ ಬೇಕು? ಏಕೆಂದರೆ, ಕಂಪನಿಯು ಷೇರುದಾರರಿಗೆ ಸಾಲವನ್ನು ನೀಡುವುದಿಲ್ಲ. ಬದಲಿಗೆ ಕಂಪನಿಯಲ್ಲಿ ಇಕ್ವಿಟಿ ನೀಡಲಾಗುತ್ತದೆ ಎಂದಿದ್ದಾರೆ. ಹಣಕಾಸು ಸಚಿವಾಲಯವು ಈ ವಿಷಯದತ್ತ ಗಮನ ಹರಿಸಬೇಕಿದೆ ಎಂದಿದ್ದಾರೆ.

ಗ್ರೋವರ್‌ ಅವರಿಗೆ ತೆರಿಗೆ ಇಲಾಖೆಯು ಪ್ರತಿಕ್ರಿಯ ನೀಡಿದೆ. ಆದಾಯ ತೆರಿಗೆ ಕಾಯ್ದೆ–1961ರ ಸೆಕ್ಷನ್‌ 68ರಂತೆ, ಮೌಲ್ಯಮಾಪನ ಅಧಿಕಾರಿಯು ಷೇರುದಾರರು/ಹೂಡಿಕೆದಾರರ ಸಾಲ ಯೋಗ್ಯತೆಯ ಕುರಿತು ಕೆಲವೊಂದು ವಿವರಣೆಗಳನ್ನು ಕೇಳಿದ್ದಾರೆ. ಅದರಂತೆ, ಕೆಳಕಂಡ ಮಾಹಿತಿಗಳನ್ನು ನೀಡುವ ಜವಾಬ್ದಾರಿಯು ತೆರಿಗೆ ಪಾವತಿಸುವ ಕಂಪನಿಯದ್ದಾಗಿರುತ್ತದೆ.

1) ಹೂಡಿಕೆದಾರರ ಗುರುತು

2) ಹೂಡಿಕೆದಾರರ ಸಾಲ ಯೋಗ್ಯತೆ

3) ವಹಿವಾಟಿನ //ಸಾಚಾತನ//

2012ರ ಹಣಕಾಸು ಕಾಯ್ದೆಯ ಪ್ರಕಾರ, ಷೇರು ಬಂಡವಾಳ, ಷೇರು ಪ್ರೀಮಿಯಂ ಇತ್ಯಾದಿ ರೂಪದಲ್ಲಿ ಹೂಡಿಕೆ ಆದ ಮೊತ್ತವು ಯಾವ ಮೂಲದಿಂದ, ಯಾವ ರೀತಿಯಲ್ಲಿ ಬಂದಿದೆ ಎನ್ನುವ ಕುರಿತು ಸೆಕ್ಷನ್‌ 68ರ ಅಡಿಯಲ್ಲಿ ಮಾಹಿತಿ ನೀಡಿವುದು ಕಡ್ಡಾಯ. ಸೆಬಿಯಲ್ಲಿ ನೋಂದಣಿ ಆದ ವೆಂಚರ್‌ ಕ್ಯಾಪಿಟಲ್‌ ಫಂಡ್‌ ಅಥವಾ ವೆಂಚರ್ ಕ್ಯಾಪಿಟಲ್‌ ಕಂಪನಿಗಳನ್ನು ಇದರಿಂದ ಹೊರಗಿಡಲಾಗಿದೆ. ದೇಶದ ಷೇರುದಾರರಿಂದ ಹೂಡಿಕೆ ಆಗಿದ್ದರೂ ಮೂಲವನ್ನು ತಿಳಿಸುವುದು ಕಡ್ಡಾಯವಾಗಿದೆ ಎಂದು ಇಲಾಖೆಯು ತಿಳಿಸಿದೆ.

ಹೂಡಿಕೆದಾರರ ಪ್ಯಾನ್‌ ಮಾಹಿತಿಯನ್ನೂ ಇಲಾಖೆಗೆ ನೀಡುವಂತೆ ಕೇಳಲಾಗಿದೆ. ಹೀಗೆ ಮಾಡುವುದರಿಂದ ಹೂಡಿಕೆದಾರರ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯನ್ನು ಪರಿಶೀಲನೆ ನಡೆಸಲು ಸಾಧ್ಯವಾಗಲಿದೆ ಎಂದು ಹೇಳಿದೆ. 

ಇನ್ಫೊಸಿಸ್‌ ಸಹಸ್ಥಾಪಕ ಮತ್ತು ಹೂಡಿಕೆದಾರ ಮೋಹನದಾಸ್ ಪೈ ಅವರು ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ‘ದಾರಿ ತಪ್ಪುಸುವಂತಿದೆ’ ಎಂದಿದ್ದಾರೆ.

‘ತೆರಿಗೆ ಭಯೋತ್ಪಾದನೆ ಹೆಚ್ಚಾಗುತ್ತಿದೆ. ದಯವಿಟ್ಟು ಮಧ್ಯಪ್ರವೇಶಿಸಿ’ ಎಂದು ಗ್ರೋವರ್‌ ಅವರು ಮೊದಲಿಗೆ ಮಾಡಿದ್ದ ‘ಎಕ್ಸ್‌’ ಪೋಸ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನಿ ಕಚೇರಿಯನ್ನು ಟ್ಯಾಗ್‌ ಮಾಡಿದ್ದಾರೆ.

ಮೂರು ವರ್ಷಗಳ ಐಟಿಆರ್‌ ನೀಡಬೇಕು ಎನ್ನುವುದು ಮತ್ತೆ ದಾರಿ ತಪ್ಪಿಸುವಂತಿದೆ ಎಂದು ಪೈ ಮತ್ತೊಂದು ಪೋಸ್ಟ್‌ ಮಾಡಿದ್ದಾರೆ. ಪ್ಯಾನ್‌ ಕೇಳುವುದು ನಿಯಮ. ಆದರೆ, ಹೂಡಿಕೆದಾರರ ಮೂರು ವರ್ಷಗಳ ಐ.ಟಿ. ರಿಟರ್ನ್ಸ್‌ ಅನ್ನು ನವೋದ್ಯಮಗಳು ನೀಡಬೇಕು ಎಂದು ಹೇಗೆ ಕೇಳುತ್ತೀರಿ? ಕಾನೂನು ಇದಕ್ಕೆ ಅವಕಾಶ ನೀಡುತ್ತದೆಯೇ? ಪ್ಯಾನ್‌ ಇದ್ದರೆ ಸಾಕು ಎಂದು ಆದಾಯ ತೆರಿಗೆ ಇಲಾಖೆಯೂ ಹೇಳುತ್ತದೆ. ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಕೇಂದ್ರ ಹಣಕಾಸು ಸಚಿವಾಲಯ, ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಈ ಪೋಸ್ಟ್‌ಗೆ ಟ್ಯಾಗ್‌ ಮಾಡಿದ್ದಾರೆ. ಪೈ ಅವರ ಪೋಸ್ಟ್‌ ಅನ್ನು ಗ್ರೋವರ್‌ ರಿ–ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.