ADVERTISEMENT

ಸ್ವತಂತ್ರ ಸಾಲ ನಿರ್ವಹಣಾ ಸಂಸ್ಥೆ ಸ್ಥಾಪನೆ

ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಪ್ರತಿಪಾದನೆ

ಪಿಟಿಐ
Published 22 ಫೆಬ್ರುವರಿ 2019, 20:21 IST
Last Updated 22 ಫೆಬ್ರುವರಿ 2019, 20:21 IST
ರಾಜೀವ್‌ ಕುಮಾರ್
ರಾಜೀವ್‌ ಕುಮಾರ್   

ನವದೆಹಲಿ: ‘ಸ್ವತಂತ್ರ ಸಾಲ ನಿರ್ವಹಣಾ ಸಂಸ್ಥೆಯನ್ನು ಸ್ಥಾಪಿಸಲು ಇದು ಸಕಾಲವಾಗಿದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿದ್ದಾರೆ.

ಸಾರ್ವಜನಿಕ ಸಾಲ ನಿರ್ವಹಣಾ ಸಂಸ್ಥೆ (ಪಿಡಿಎಂಎ) ಸ್ಥಾಪಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು 2015ರ ಬಜೆಟ್‌ನಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು. ಅದು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

‘ಭಾರತೀಯ ರಿಸರ್ವ್‌ ಬ್ಯಾಂಕ್‌ನ ಕಾರ್ಯವ್ಯಾಪ್ತಿಯ ಹೊರಗೆ ಈ ಸಂಸ್ಥೆಯನ್ನು ಸ್ಥಾಪಿಸಲು ಈಗ ಕಾಲ ಸನ್ನಿಹಿತವಾಗಿದೆ. ಸ್ವತಂತ್ರ ಸಂಸ್ಥೆಯು ಸರ್ಕಾರಿ ಸಾಲದ ನಿರ್ವಹಣೆಗೆ ಹೆಚ್ಚು ಗಮನ ನೀಡಲಿದೆ. ಇದರಿಂದ ಸರ್ಕಾರವು ಸಾಲಕ್ಕೆ ಮಾಡುವ ವೆಚ್ಚಕ್ಕೆ ಕಡಿವಾಣ ಹಾಕುವುದಕ್ಕೂ ಸಾಧ್ಯವಾಗಲಿದೆ’ ಎಂದು ರಾಜೀವ್‌ ಕುಮಾರ್‌ ಹೇಳಿದ್ದಾರೆ.

ADVERTISEMENT

ನೀತಿ ಆಯೋಗವು ಇಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

‘ಸದ್ಯಕ್ಕೆ ಸರ್ಕಾರದ ಸಾಲ ಮತ್ತು ಮಾರುಕಟ್ಟೆಯಿಂದ ಸಾಲ ಸಂಗ್ರಹಿಸುವುದನ್ನು ಆರ್‌ಬಿಐ ನಿರ್ವಹಿಸುತ್ತಿದೆ. ಕೇಂದ್ರೀಯ ಬ್ಯಾಂಕ್‌ ಹಣದುಬ್ಬರ ನಿಯಂತ್ರಣಕ್ಕೆ ಹೆಚ್ಚು ಗಮನ ನೀಡುತ್ತಿರುವಾಗ, ಆರ್ಥಿಕ ಬೆಳವಣಿಗೆ, ಉದ್ಯೋಗ ಅವಕಾಶ, ಸಾಲ ಮತ್ತಿತರ ಕಾನೂನಿಗೆ ಸಂಬಂಧಿಸಿದ ವಿದ್ಯಮಾನಗಳನ್ನು ನಿರ್ವಹಿಸಲು ಪ್ರತ್ಯೇಕ ಸಂಸ್ಥೆ ಸ್ಥಾಪಿಸುವ ಅಗತ್ಯ ಇದೆ. ಈ ಬಗ್ಗೆ ದೇಶದಲ್ಲಿ ವ್ಯಾಪಕ ಚರ್ಚೆಯೂ ನಡೆಯಬೇಕಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಆರ್‌ಬಿಐ, ಬಡ್ಡಿ ದರಗಳನ್ನು ನಿರ್ಧರಿಸುವುದರ ಜತೆಗೆ ಸರ್ಕಾರಿ ಬಾಂಡ್‌ಗಳ ಖರೀದಿ ಮತ್ತು ಮಾರಾಟವನ್ನೂ ಮಾಡುತ್ತಿದೆ. ಸ್ವತಂತ್ರ ಸಾಲ ನಿರ್ವಹಣಾ ಸಂಸ್ಥೆ ಸ್ಥಾಪಿಸುವುದರಿಂದ ಆರ್‌ಬಿಐನಲ್ಲಿನ ಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲೂ ನೆರವಾಗಲಿದೆ.

ಬೃಹತ್‌ ಬ್ಯಾಂಕ್ ಅಗತ್ಯ: ‘ಬ್ಯಾಂಕಿಂಗ್‌ ಕ್ಷೇತ್ರದ ಗರಿಷ್ಠ ಪ್ರಯೋಜನ ಪಡೆಯಲು, ದೇಶದಲ್ಲಿ ಜಾಗತಿಕ ಗಾತ್ರದ ಬೃಹತ್‌ ಬ್ಯಾಂಕ್‌ ಅಸ್ತಿತ್ವಕ್ಕೆ ಬರುವ ಅಗತ್ಯ ಇದೆ.

‘ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಸದ್ಯಕ್ಕೆ ದೇಶದ ಅತಿದೊಡ್ಡ ಬ್ಯಾಂಕ್‌ ಆಗಿದ್ದರೂ ಅದು ಈಗಲೂ ವಿಶ್ವದ 60ನೇ ಅತಿದೊಡ್ಡ ಬ್ಯಾಂಕ್‌ ಆಗಿದೆ. ಇದರಿಂದ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ದೇಶಿ ಬ್ಯಾಂಕ್‌ ಪ್ರಭಾವ ಬೀರಲು ಸಾಧ್ಯವಾಗುತ್ತಿಲ್ಲ’ ಎಂದೂ ಅವರು ವಿಶ್ಲೇಷಿಸಿದ್ದಾರೆ.

*
ಕಂಪನಿಗಳು ಸ್ಪರ್ಧಾತ್ಮಕ ದರಗಳಲ್ಲಿ ದೀರ್ಘಾವಧಿ ಸಾಲ ಪಡೆಯಲು ಕಾರ್ಪೊರೇಟ್‌ ಕ್ಷೇತ್ರಕ್ಕಾಗಿ ಸಾಲದ ಮಾರುಕಟ್ಟೆ ಅಭಿವೃದ್ಧಿಪಡಿಸಬೇಕಾಗಿದೆ.
-ರಾಜೀವ್‌ ಕುಮಾರ್‌, ನೀತಿ ಆಯೋಗದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.