
ನವದೆಹಲಿ: ದೇಶದಲ್ಲಿ ಚಿನ್ನದ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ, ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿರ್ಧರಿಸುವ ಸ್ಥಾನ ಹೊಂದುವ ಗುರಿಯನ್ನು ಭಾರತ ಹೊಂದಿದೆ ಎಂದು ಉದ್ಯಮದ ತಜ್ಞರು ಹೇಳಿದ್ದಾರೆ.
‘ಪ್ರಸ್ತುತ ದೇಶದಲ್ಲಿ ಚಿನ್ನದ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿಲ್ಲ. ಹೀಗಾಗಿ ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ನಿರ್ಧರಿಸಿದ ಬೆಲೆಗೆ ಚಿನ್ನ ಖರೀದಿ ಮಾಡುತ್ತಿದೆ. ಚಿನ್ನದ ಉತ್ಪಾದನೆ ಹೆಚ್ಚಳವಾದರೆ ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿರ್ಧರಿಸುವ ಮಟ್ಟವನ್ನು ತಲುಪಲಿದೆ’ ಎಂದು ವಿಶ್ವ ಚಿನ್ನ ಸಮಿತಿಯ (ಡಬ್ಲ್ಯುಜಿಸಿ) ಭಾರತದ ಸಿಇಒ ಸಚಿನ್ ಜೈನ್ ಹೇಳಿದ್ದಾರೆ.
ಹರಳು ಮತ್ತು ಚಿನ್ನಾಭರಣ ಸಮಾವೇಶದಲ್ಲಿ ಮಾತನಾಡಿದ ಅವರು, ವಿಕಸಿತ ಭಾರತ ಗುರಿ ಸಾಧನೆಗೆ ಗಣಿಗಾರಿಕೆ ಪ್ರಮುಖವಾದ ಅಂಶವಾಗಿದೆ. ಮುಂದಿನ ದಶಕದಲ್ಲಿ ಭಾರತದ ಗಣಿಗಾರಿಕೆಯಿಂದ ಉತ್ಪಾದನೆಯಾದ ಚಿನ್ನದಿಂದ ಅಂದಾಜು ಶೇ 20ರಷ್ಟು ದೇಶದ ಚಿನ್ನದ ಬೇಡಿಕೆಯನ್ನು ಪೂರೈಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಮುಂದಿನ ಎರಡರಿಂದ ಮೂರು ವರ್ಷದಲ್ಲಿ ಭಾರತವು, ಚಿನ್ನಾಭರಣಗಳ ಜಾಗತಿಕ ಹಬ್ ಆಗಿ ಹೊರಹೊಮ್ಮುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
‘ಭಾರತ ಸರ್ಕಾರದ ಬಳಿ 800 ಟನ್‌ನಷ್ಟು ಚಿನ್ನ ಇದ್ದರೆ, ಜನರ ಬಳಿ 25 ಸಾವಿರ ಟನ್ ಚಿನ್ನ ಇದೆ. ಆದರೆ, ಸ್ವಿಟ್ಜರ್ಲೆಂಡ್‌ನಲ್ಲಿ ಸರ್ಕಾರದ ಬಳಿ 1 ಸಾವಿರ ಟನ್ ಚಿನ್ನವಿದ್ದರೆ, ಜನರ ಬಳಿ 200 ಟನ್‌ನಷ್ಟು ಚಿನ್ನ ಇದೆ ಎಂದು ಆದಿತ್ಯ ಬಿರ್ಲಾ ಸಮೂಹದ ನಾವೆಲ್ ಜ್ಯುವೆಲ್ಸ್‌ನ ಸಿಇಒ ಸಂದೀಪ್ ಕೊಹ್ಲಿ ಹೇಳಿದ್ದಾರೆ.
Highlights -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.