
ನವದೆಹಲಿ: ನಿರ್ಣಾಯಕ ಖನಿಜಗಳು ಮತ್ತು ವಿರಳ ಲೋಹದ ನಿಕ್ಷೇಪಗಳಿಗೆ ಸಂಬಂಧಿಸಿದ ಒಪ್ಪಂದಕ್ಕೆ ಭಾರತ ಮತ್ತು ಬ್ರೆಜಿಲ್ ಶನಿವಾರ ಸಹಿ ಹಾಕಿವೆ.
‘ನಿರ್ಣಾಯಕ ಖನಿಜಗಳು ಮತ್ತು ವಿರಳ ಲೋಹಗಳ ಮೇಲಿನ ಈ ಒಪ್ಪಂದವು ಪೂರೈಕೆ ಸರಪಳಿಯನ್ನು ನಿರ್ಮಿಸಲು ಮಹತ್ವದ್ದಾಗಿದೆ’ ಎಂದು ಬ್ರೆಜಿಲ್‌ನ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರ ಜೊತೆಗಿನ ಮಾತುಕತೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬ್ರೆಜಿಲ್ ವಿಶ್ವದ ಎರಡನೇ ಅತಿದೊಡ್ಡ ನಿರ್ಣಾಯಕ ಖನಿಜಗಳ ನಿಕ್ಷೇಪವನ್ನು ಹೊಂದಿದೆ. ಈ ಖನಿಜವನ್ನು ವಿದ್ಯುತ್‌ಚಾಲಿತ ವಾಹನಗಳು, ಸೌರಫಲಕಗಳು, ಸ್ಮಾರ್ಟ್‌ಫೋನ್, ಜೆಟ್ ವಿಮಾನಗಳು ಸೇರಿದಂತೆ ವಿವಿಧೆಡೆ ಬಳಸಲಾಗುತ್ತದೆ.
ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸುವುದು, ದೇಶೀಯ ಉತ್ಪಾದನೆ ಹೆಚ್ಚಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ. ಅಲ್ಲದೆ, ಹೊಸ ಪೂರೈಕೆದಾರರನ್ನು ಹುಡುಕುತ್ತಿದೆ.
‘ನವೀಕರಿಸಬಹುದಾದ ಇಂಧನ ಮತ್ತು ನಿರ್ಣಾಯಕ ಖನಿಜಗಳ ವಿಷಯಗಳಲ್ಲಿ ಹೂಡಿಕೆ ಮತ್ತು ಸಹಕಾರವನ್ನು ಹೆಚ್ಚಿಸುವುದು ನಾವು ಇಂದು ಸಹಿ ಹಾಕಿರುವ ಒಪ್ಪಂದದ ಪ್ರಮುಖ ವಿಷಯವಾಗಿದೆ’ ಎಂದು ಸಿಲ್ವಾ ತಿಳಿಸಿದ್ದಾರೆ.
ಡಿಜಿಟಲ್ ಸಹಕಾರ, ಆರೋಗ್ಯ, ಉದ್ಯಮಶೀಲತೆ ಮತ್ತು ಇತರೆ ಕ್ಷೇತ್ರಗಳನ್ನು ಒಳಗೊಂಡಂತೆ ಒಂಬತ್ತು ಇತರೆ ಒಪ್ಪಂದಗಳು ಮತ್ತು ತಿಳಿವಳಿಕೆ ಪತ್ರಗಳನ್ನು ಅಂತಿಮಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
2025ರಲ್ಲಿ ಭಾರತ ಮತ್ತು ಬ್ರೆಜಿಲ್‌ನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೌಲ್ಯವು ₹1.36 ಲಕ್ಷ ಕೋಟಿಯಷ್ಟಾಗಿತ್ತು.
Highlights - null
20 ಬಿಲಿಯನ್ ಡಾಲರ್ ವಹಿವಾಟು ಗುರಿ
ಮುಂದಿನ ಐದು ವರ್ಷಗಳಲ್ಲಿ 20 ಬಿಲಿಯನ್ ಡಾಲರ್‌ಗಿಂತ (₹1.81 ಲಕ್ಷ ಕೋಟಿ) ಹೆಚ್ಚಿನ ದ್ವಿಪಕ್ಷೀಯ ವ್ಯಾಪಾರವನ್ನು ನಡೆಸುವ ಗುರಿಯನ್ನು ಭಾರತ ಮತ್ತು ಬ್ರೆಜಿಲ್ ನಿಗದಿಪಡಿಸಿವೆ. ಲ್ಯಾಟಿನ್ ಅಮೆರಿಕದಲ್ಲಿ ಬ್ರೆಜಿಲ್ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ. ನಮ್ಮ ವ್ಯಾಪಾರವು ಕೇವಲ ಒಂದು ಅಂಕಿ ಅಂಶವಲ್ಲ ಬದಲಾಗಿ ನಂಬಿಕೆಯ ಪ್ರತಿಬಿಂಬವಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಅಧ್ಯಕ್ಷ ಲುಲಾ ಅವರ ದೂರದೃಷ್ಟಿಯ ದೃಷ್ಟಿಕೋನ ಮತ್ತು ಸ್ಪೂರ್ತಿದಾಯಕ ನಾಯಕತ್ವದಿಂದ ಭಾರತ ಮತ್ತು ಬ್ರೆಜಿಲ್ ನಡುವಿನ ಸಂಬಂಧಗಳು ಬಹಳ ಹಿಂದಿನಿಂದಲೂ ಪ್ರಯೋಜನ ಪಡೆದಿವೆ ಎಂದು ಹೇಳಿದ್ದಾರೆ. ಭಯೋತ್ಪಾದನೆ ಮತ್ತು ಅದನ್ನು ಬೆಂಬಲಿಸುವವರು ಇಡೀ ಮಾನವೀಯತೆಯ ಶತ್ರುಗಳು ಎಂಬುದನ್ನು ಎರಡೂ ದೇಶಗಳು ಒಪ್ಪುತ್ತವೆ ಎಂದು ಮೋದಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.