ನವದೆಹಲಿ: ಭಾರತ ಹಾಗೂ ಚಿಲಿ, ಪೆರು ದೇಶಗಳ ನಡುವಿನ ಮುಂದಿನ ಸುತ್ತಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದ ಮಾತುಕತೆಯು ಕ್ರಮವಾಗಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ.
ಅಕ್ಟೋಬರ್ 27ರಿಂದ ಚಿಲಿ ದೇಶದೊಂದಿಗಿನ 5 ದಿನದ ಮಾತುಕತೆಯು ಸ್ಯಾಂಟಿಯಾಗೋದಲ್ಲಿ ಆರಂಭವಾಗಲಿದೆ. ನವೆಂಬರ್ 3ರಿಂದ ಪೆರು ಜೊತೆ ಮೂರು ದಿನಗಳ ಮಾತುಕತೆ ಲಿಮಾದಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಲಿ ಜೊತೆ ನಡೆಯಲಿರುವ ಮಾತುಕತೆಯು ಎರಡನೇ ಸುತ್ತಿನದ್ದು, ಪೆರು ಜೊತೆಗಿನ ಮಾತುಕತೆ ಎಂಟನೇ ಸುತ್ತಿನದ್ದಾಗಿದೆ.
2006ರಲ್ಲಿ ಭಾರತ ಮತ್ತು ಚಿಲಿ ಆದ್ಯತಾ ವ್ಯಾಪಾರ ಒಪ್ಪಂದವನ್ನು (ಪಿಟಿಎ) ಮಾಡಿಕೊಂಡಿದ್ದವು. ಇದೀಗ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಪಿಎ) ಮುಂದಾಗಿವೆ.
2024–25ರ ಆರ್ಥಿಕ ವರ್ಷದಲ್ಲಿ ಭಾರತವು ಚಿಲಿಗೆ ₹10,200 ಕೋಟಿಯಷ್ಟು ಮೌಲ್ಯದ ಸರಕುಗಳನ್ನು ರಫ್ತು ಮಾಡಿತ್ತು. ಇದು 2023–24ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 2.46ರಷ್ಟು ಕಡಿಮೆ. ಕಳೆದ ಆರ್ಥಿಕ ವರ್ಷದಲ್ಲಿ ಆಮದು ಪ್ರಮಾಣ ಶೇ 72ರಷ್ಟು ಏರಿಕೆಯಾಗಿ, ₹23 ಸಾವಿರ ಕೋಟಿಯಷ್ಟಾಗಿತ್ತು.
ಪೆರುಗೆ ದೇಶದ ರಫ್ತು ಶೇ 9ರಷ್ಟು ಹೆಚ್ಚಳವಾಗಿದ್ದು,₹8,870 ಕೋಟಿಯಷ್ಟಾಗಿತ್ತು. ಆಮದು ಪ್ರಮಾಣ ಶೇ 60ರಷ್ಟು ಏರಿಕೆಯಾಗಿ, ₹44,200 ಕೋಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.