
ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ 1ರಿಂದ ಡಿಸೆಂಬರ್ 17ರವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹವು ₹17.04 ಲಕ್ಷ ಕೋಟಿಯಷ್ಟಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಂಕಿ–ಅಂಶಗಳು ಶುಕ್ರವಾರ ತಿಳಿಸಿವೆ.
ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೇರ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಶೇ 8ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
ಮರುಪಾವತಿಯು ಮಂದಗೊಂಡಿರುವುದು ಮತ್ತು ಕಾರ್ಪೊರೇಟ್‌ಗಳಿಂದ ಮುಂಗಡ ತೆರಿಗೆ ಸಂಗ್ರಹದ ಪ್ರಮಾಣದಲ್ಲಿ ಏರಿಕೆಯಾಗಿರುವುದು ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ.
ನಿವ್ವಳ ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಶೇ 10.54ರಷ್ಟು ಹೆಚ್ಚಳವಾಗಿ,₹8.17 ಲಕ್ಷ ಕೋಟಿಯಾಗಿದೆ. ವೈಯಕ್ತಿಕ ಆದಾಯ ತೆರಿಗೆಯನ್ನು ಒಳಗೊಂಡಿರುವ ಕಾರ್ಪೊರೇಟ್‌ಯೇತರ ತೆರಿಗೆ ಸಂಗ್ರಹವು ₹8.47 ಲಕ್ಷ ಕೋಟಿಯಾಗಿದ್ದು, ಶೇ 6.37ರಷ್ಟು ಏರಿಕೆ ಕಂಡಿದೆ. ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಸಂಗ್ರಹವು ₹40,195 ಕೋಟಿಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮರುಪಾವತಿಯು (ರೀಫಂಡ್) ಶೇ 14ರಷ್ಟು ಇಳಿದಿದ್ದು, ₹2.97 ಲಕ್ಷ ಕೋಟಿಯಾಗಿದೆ. ಮರುಪಾವತಿಯನ್ನು ಸರಿಹೊಂದಿಸುವ ಮೊದಲು ಒಟ್ಟು ನೇರ ತೆರಿಗೆ ಸಂಗ್ರಹವು ಶೇ 4.16ರಷ್ಟು ಏರಿಕೆಯಾಗಿ, ₹20.01 ಲಕ್ಷ ಕೋಟಿ ದಾಟಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು, ನೇರ ತೆರಿಗೆ ಮೂಲಕ ₹25.20 ಲಕ್ಷ ಕೋಟಿ ಸಂಗ್ರಹಿಸಲು ಗುರಿ ಹೊಂದಿದೆ. ಇದು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 12.7ರಷ್ಟು ಹೆಚ್ಚಳ. ಷೇರು ವಹಿವಾಟು ತೆರಿಗೆ ಮೂಲಕ ₹78 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.
‘ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿರುವುದು ಕಾರ್ಪೊರೇಟ್ ಕಂಪನಿಗಳ ಸದೃಢ ಗಳಿಕೆಯನ್ನು ಸೂಚಿಸುತ್ತಿದೆ’ ಎಂದು ಡೆಲಾಯ್ಟ್ ಇಂಡಿಯಾ ಪಾಲುದಾರ ರೋಹಿಂಟನ್ ಸಿಧ್ವಾ ಹೇಳಿದ್ದಾರೆ. ಮರುಪಾವತಿ ಸಂಬಂಧಿಸಿದ ಪ್ರಕರಣಗಳ ಹೆಚ್ಚಿನ ಪರಿಶೀಲನೆಯಿಂದಾಗಿ ಮರುಪಾವತಿ ವಿತರಣೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.