ADVERTISEMENT

ಈಕ್ವಿಟಿ ಎಂಎಫ್‌: ತಗ್ಗಿದ ಹೂಡಿಕೆ

ಹೆಚ್ಚು ಹೂಡಿಕೆ ಆಕರ್ಷಿಸಿದ ವ್ಯವಸ್ಥಿತ ಹೂಡಿಕೆ ಯೋಜನೆ: ಎಎಂಎಫ್‌ಐ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2023, 14:49 IST
Last Updated 11 ಅಕ್ಟೋಬರ್ 2023, 14:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಸೆಪ್ಟೆಂಬರ್‌ನಲ್ಲಿ ಬಂಡವಾಳ ಹೂಡಿಕೆ ಪ್ರಮಾಣ ಕಡಿಮೆ ಆಗಿದೆ ಎಂದು ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಬುಧವಾರ ತಿಳಿಸಿದೆ.

ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಆಗಸ್ಟ್‌ನಲ್ಲಿ ₹20,245 ಕೋಟಿ ಹೂಡಿಕೆ ಆಗಿತ್ತು. ಸೆಪ್ಟೆಂಬರ್‌ನಲ್ಲಿ ₹14,091 ಕೋಟಿ ಹೂಡಿಕೆ ಆಗಿದ್ದು, ಶೇ 30.4ರಷ್ಟು ಇಳಿಕೆಯಾಗಿದೆ ಎಂದು ಅದು ಮಾಹಿತಿ ನೀಡಿದೆ.

ಹೂಡಿಕೆದಾರರು ಉತ್ತಮ ಗಳಿಕೆಯ ನಿರೀಕ್ಷೆಯಿಂದಾಗಿ ಲಾರ್ಜ್‌ ಕ್ಯಾಪ್‌ಗೆ ಬದಲಾಗಿ ಸ್ಮಾಲ್ ಮತ್ತು ಮಿಡ್‌ ಕ್ಯಾಪ್‌ ಫಂಡ್‌ಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಂಡರು. ಇದರಿಂದಾಗಿಯೇ ಹೂಡಿಕೆ ತಗ್ಗಿದೆ ಎಂದು ಹೇಳಿದೆ.

ADVERTISEMENT

ಜಾಗತಿಕ ಆರ್ಥಿಕತೆಯ ಮಂದಗತಿಯ ಬೆಳವಣಿಗೆ ಕುರಿತಾದ ಆತಂಕ ಮತ್ತು ಅಮೆರಿಕದ ಬಾಂಡ್ ಗಳಿಕೆ ಹೆಚ್ಚಾಗಿರುವುದೇ ವಿದೇಶಿ ಹೂಡಿಕೆದಾರರು ಈಚೆಗೆ ಮಾರಾಟ ಮಾಡುತ್ತಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ. ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟ ಉತ್ತಮವಾಗಿ ಇರುವುದರಿಂದ ಶೀಘ್ರದಲ್ಲೇ ವಿದೇಶಿ ಹೂಡಿಕೆದಾರರು ಮತ್ತೆ ಭಾರತದ ಷೇರುಪೇಟೆಗಳಲ್ಲಿ ಹೂಡಿಕೆ ಮಾಡಲಿದ್ದಾರೆ ಎಂದು ಮ್ಯಾರಥಾನ್‌ ಟ್ರೆಂಡ್ಸ್‌ನ ಪೋರ್ಟ್‌ಫೋಲಿಯೊ ಮ್ಯಾನೇಜ್‌ಮೆಂಟ್‌ ಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅತುಲ್ ಸೂರಿ ತಿಳಿಸಿದ್ದಾರೆ.

ರಿಟೇಲ್‌ ಹೂಡಿಕೆದಾರರು ನಿರಂತರವಾಗಿ ಖರೀದಿ ನಡೆಸುತ್ತಿದ್ದಾರೆ. ಹೀಗಾಗಿ ವಿದೇಶಿ ಬಂಡವಾಳ ಹೊರಹರಿವಿನ ಪರಿಣಾಮವು ಮಾರುಕಟ್ಟೆಯ ಮೇಲೆ ಹೆಚ್ಚಿನ ಮಟ್ಟದಲ್ಲಿ ಆಗಿಲ್ಲ. ಸೆಪ್ಟೆಂಬರ್‌ನಲ್ಲಿ ಸ್ಮಾಲ್‌ ಕ್ಯಾಪ್ ಶೇ 4.12 ಮತ್ತು ಮಿಡ್‌ ಕ್ಯಾಪ್‌ ಶೇ 3.63ರಷ್ಟು ಗಳಿಕೆ ಕಂಡಿವೆ. 2023ರಲ್ಲಿ ಈವರೆಗೆ ಸ್ಮಾಲ್‌ ಕ್ಯಾಪ್‌ ಶೇ 32.54ರಷ್ಟು ಮತ್ತು ಮಿಡ್‌ ಕ್ಯಾಪ್‌ ಶೇ 29ರಷ್ಟು ಏರಿಕೆ ಕಂಡಿವೆ.

ಎಸ್‌ಐಪಿ ಆಕರ್ಷಣೆ: ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್ಐಪಿ) ಮೂಲಕ ಸೆಪ್ಟೆಂಬರ್‌ನಲ್ಲಿ ದಾಖಲೆಯ ₹16,042 ಕೋಟಿ ಹೂಡಿಕೆ ಆಗಿದೆ. ಸೆಪ್ಟೆಂಬರ್‌ನಲ್ಲಿ 36.8 ಲಕ್ಷ ಹೊಸ ಎಸ್‌ಐಪಿ ಖಾತೆಗಳನ್ನು ತೆರೆಯಲಾಗಿದೆ ಎಂದು ಒಕ್ಕೂಟವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.