ADVERTISEMENT

ಜೀವ ವಿಮೆಗೆ ತೆರಿಗೆ: ಹಣದುಬ್ಬರ ಪರಿಗಣಿಸಲು ಅವಕಾಶ?

ರಾಯಿಟರ್ಸ್
Published 16 ಮಾರ್ಚ್ 2023, 1:38 IST
Last Updated 16 ಮಾರ್ಚ್ 2023, 1:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ₹ 5 ಲಕ್ಷಕ್ಕಿಂತ ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಿರುವ ಜೀವ ವಿಮಾ ಯೋಜನೆಗಳಿಂದ ಸಿಗುವ ಲಾಭಕ್ಕೆ ತೆರಿಗೆ ವಿಧಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ಬದಲಾವಣೆ ತರುವ ಸಾಧ್ಯತೆ ಇಲ್ಲ. ಆದರೆ, ತೆರಿಗೆ ಲೆಕ್ಕ ಹಾಕುವಾಗ, ಹಣದುಬ್ಬರದ ಪ್ರಮಾಣವನ್ನೂ ಪರಿಗಣನೆಗೆ ತೆಗೆದುಕೊಳ್ಳಲು ಅವಕಾಶ ಕೊಡುವ ಸಾಧ್ಯತೆ ಇದೆ.

ಫೆಬ್ರುವರಿ 1ರಂದು ಬಜೆಟ್ ಮಂಡನೆ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಜೀವ ವಿಮಾ ಪಾಲಿಸಿಯ ಒಟ್ಟು ಪ್ರೀಮಿಯಂ ಮೊತ್ತವು ₹ 5 ಲಕ್ಷವನ್ನು ಮೀರಿದ್ದರೆ, ಒಟ್ಟು ಸಿಗುವ ಹಣಕ್ಕೆ ನೀಡುವ ತೆರಿಗೆ ವಿನಾಯಿತಿಯನ್ನು ಕೈಬಿಡಲಾಗುತ್ತದೆ’ ಎಂದು ಹೇಳಿದ್ದರು.

ಏಪ್ರಿಲ್‌ 1ರ ನಂತರದಲ್ಲಿ ಖರೀದಿಸುವ ಪಾಲಿಸಿಗಳಿಗೆ ಈ ನಿಯಮ ಅನ್ವಯವಾಗುತ್ತದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ ಈ ಪ್ರಸ್ತಾವನೆಯು ವಿಮಾ ಕಂಪನಿಗಳಲ್ಲಿ ಆತಂಕ ಮೂಡಿಸಿದೆ. ಪ್ರಮುಖ ವಿಮಾ ಕಂಪನಿಗಳ ಪ್ರತಿನಿಧಿಗಳು, ನಿರ್ಮಲಾ ಅವರನ್ನು ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ, ಈ ಪ್ರಸ್ತಾವ ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು.

ADVERTISEMENT

‘ಬಜೆಟ್ ಪ್ರಸ್ತಾವನೆಯು ಅತಿ ಶ್ರೀಮಂತರ (ಎನ್‌ಎನ್‌ಐ) ಮೇಲೆ ಮಾತ್ರ ‍ಪರಿಣಾಮ ಬೀರುತ್ತದೆ. ಜನಸಾಮಾನ್ಯರಿಗೆ ಇದರಿಂದ ತೊಂದರೆ ಇಲ್ಲ. ಹೀಗಾಗಿ, ₹ 5 ಲಕ್ಷ ಎಂಬ ಮಿತಿಯನ್ನು ಸಡಿಲಿಸುವ ಸಾಧ್ಯತೆ ಇಲ್ಲ’ ಎಂದು ಅಧಿಕಾರಿಯೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ತಿಳಿಸಿದ್ದಾರೆ.

ಆದರೆ, ಈ ಮೊತ್ತದ ಪ್ರೀಮಿಯಂ ಪಾವತಿಸುವ ಜೀವ ವಿಮೆಗಳಿಂದ ಬರುವ ಹಣಕ್ಕೆ ತೆರಿಗೆ ಪಾವತಿ ಮಾಡುವಾಗ, ಹಣದುಬ್ಬರದ ಪ್ರಮಾಣವನ್ನೂ ಪರಿಗಣಿಸಿ ತೆರಿಗೆ ಲೆಕ್ಕ ಹಾಕಲು (ಇಂಡೆಕ್ಸೇಷನ್) ಅವಕಾಶ ಕಲ್ಪಿಸುವ ಬಗ್ಗೆ ಕೇಂದ್ರವು ಪರಿಶೀಲನೆ ನಡೆಸಲಿದೆ.

ತೆರಿಗೆಯನ್ನು ಈ ರೀತಿಯಲ್ಲಿ ಲೆಕ್ಕ ಹಾಕಲು ಅವಕಾಶ ಕೊಡುವ ಬಗ್ಗೆ ಪ್ರಧಾನಿಯವರ ಕಚೇರಿಯು ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ. ಈ ವಿಚಾರವಾಗಿ ಹಣಕಾಸು ಸಚಿವಾಲಯದಿಂದ ಪ್ರತಿಕ್ರಿಯೆ ಸಿಕ್ಕಿಲ್ಲ. ‘ಇಂಡೆಕ್ಸೇಷನ್ ನೆಲೆಯಲ್ಲಿ ಲೆಕ್ಕ ಹಾಕಿದಾಗ ಪಾವತಿಸಬೇಕಿರುವ ತೆರಿಗೆ ಮೊತ್ತವು ಕಡಿಮೆ ಆಗುತ್ತದೆ’ ಎಂದು ತೆರಿಗೆ ಸಲಹೆಗಾರ ಕುಲದೀಪ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.