ನ್ಯೂಯಾರ್ಕ್: 2011–12ರಿಂದ 2022–23ರ ನಡುವಿನ ಅವಧಿಯಲ್ಲಿ ಭಾರತವು 17.1 ಕೋಟಿ ಜನರನ್ನು ಕಡು ಬಡತನ ರೇಖೆಯಿಂದ ಹೊರತರುವಲ್ಲಿ ಯಶಸ್ವಿಯಾಗಿದೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.
ಜೀವನ ಸಾಗಿಸಲು ದಿನವೊಂದಕ್ಕೆ 2.15 ಡಾಲರ್‌ಗಿಂತ (₹183) ಕಡಿಮೆ ಹಣದ ಹೊಂದಿದವರನ್ನು ಕಡು ಬಡವರು ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಈ ಒಂದು ದಶಕದ ಅವಧಿಯಲ್ಲಿ ಕಡು ಬಡತನದ ಪ್ರಮಾಣ ಕಡಿಮೆಯಾಗಿದೆ. 2011–12ರಲ್ಲಿ ಶೇ 16.2ರಷ್ಟಿದ್ದ ಕಡು ಬಡತನವು, 2022–23ರಲ್ಲಿ ಶೇ 2.3ಕ್ಕೆ ತಗ್ಗಿದೆ ಎಂದು ಭಾರತದ ಬಡತನ ಮತ್ತು ಸಮಾನತೆಗೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ವರದಿಯು ವಿವರಿಸಿದೆ.
ಇದೇ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ 18.4ರಷ್ಟಿದ್ದ ಕಡು ಬಡತನವು ಶೇ 2.8ಕ್ಕೆ ಇಳಿದಿದೆ. ನಗರ ಪ್ರದೇಶದಲ್ಲಿ ಶೇ 10.7ರಿಂದ ಶೇ 1.1ಕ್ಕೆ ತಗ್ಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ನಡುವಿನ ಅಂತರವು ಶೇ 7.7ರಿಂದ ಶೇ 1.7ಕ್ಕೆ ಇಳಿದಿದೆ ಎಂದು ಹೇಳಿದೆ.
ಅಲ್ಲದೆ, ಭಾರತವು ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿದ ರಾಷ್ಟ್ರಗಳ (ಎಲ್‌ಎಂಐಸಿ) ಪಟ್ಟಿಗೆ ಸೇರ್ಪಡೆಯಾಗಿದೆ. ಜೀವನ ಸಾಗಿಸಲು ದಿನವೊಂದಕ್ಕೆ 3.65 ಡಾಲರ್‌ಗಿಂತ (₹311) ಕಡಿಮೆ ಹಣ ಹೊಂದಿದ ಬಡವರ ಸಂಖ್ಯೆಯೂ ಕಡಿಮೆಯಾಗಿದೆ. ಈ ಬಡತನ ರೇಖೆಯಡಿ ಇದ್ದ 37.8 ಕೋಟಿ ಜನರು ಹೊರ ಬಂದಿದ್ದಾರೆ ಎಂದು ತಿಳಿಸಿದೆ.
ಒಂದು ದಶಕದ ಅವಧಿಯಲ್ಲಿ ಗ್ರಾಮೀಣ ಬಡತನ ಪ್ರಮಾಣವು ಶೇ 69ರಿಂದ ಶೇ 3.25ಕ್ಕೆ ಇಳಿಕೆಯಾಗಿದ್ದರೆ, ನಗರ ಬಡತನ ಪ್ರಮಾಣವು ಶೇ 43.5ರಿಂದ ಶೇ 17.2ಕ್ಕೆ ತಗ್ಗಿದೆ ಎಂದು ತಿಳಿಸಿದೆ.
2011–12ರಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಕಡು ಬಡವರಿದ್ದರು. ದೇಶದ ಒಟ್ಟು ಕಡು ಬಡವರ ಪೈಕಿ ಈ ಐದು ರಾಜ್ಯಗಳಲ್ಲಿ ಶೇ 65ರಷ್ಟಿದ್ದರು. 2022–23ರ ವೇಳೆಗೆ ಇಳಿಕೆಯಾಗಿದೆ ಎಂದು ಹೇಳಿದೆ.
ಒಂದು ದಶಕದ ಅವಧಿಯಲ್ಲಿ ಯುವಜನರ ನಿರುದ್ಯೋಗ ಪ್ರಮಾಣವು ಶೇ 13.3ರಿಂದ ಶೇ 29ಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.