ADVERTISEMENT

ಏಪ್ರಿಲ್‌ನಲ್ಲಿ ವೇಗದ ಬೆಳವಣಿಗೆ ಕಂಡ ತಯಾರಿಕಾ ಚಟುವಟಿಕೆ

ಪಿಟಿಐ
Published 2 ಮೇ 2022, 10:56 IST
Last Updated 2 ಮೇ 2022, 10:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಗಳು ಏಪ್ರಿಲ್‌ನಲ್ಲಿ ವೇಗದ ಬೆಳವಣಿಗೆ ಕಂಡಿವೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಹೇಳಿದೆ.

ತಯಾರಿಕೆ ಮತ್ತು ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿರುವುದು ಮತ್ತು ಅಂತರರಾಷ್ಟ್ರೀಯ ಮಾರಾಟ ಹೆಚ್ಚಾಗಿರುವುದರಿಂದ ಉತ್ತಮ ಬೆಳವಣಿಗೆ ಸಾಧ್ಯವಾಗಿದೆ ಎಂದು ತಿಳಿಸಿದೆ.

ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್ ಇಂಡೆಕ್ಸ್‌ (ಪಿಎಂಐ) ಮಾರ್ಚ್‌ನಲ್ಲಿ 54ರಷ್ಟು ಇತ್ತು. ಏಪ್ರಿಲ್‌ನಲ್ಲಿ 54.7ಕ್ಕೆ ಏರಿಕೆ ಆಗಿದೆ. ಕೋವಿಡ್‌ ನಿರ್ಬಂಧಗಳನ್ನು ಹಿಂದಕ್ಕೆ ಪಡೆದಿರುವುದರಿಂದ ಬೇಡಿಕೆ ಹೆಚ್ಚಾಗುತ್ತಿದೆ.

ADVERTISEMENT

ಸತತ 10ನೇ ತಿಂಗಳಿನಲ್ಲಿಯೂ ತಯಾರಿಕಾ ವಲಯದ ಚಟುವಟಿಕೆಗಳು ಏರುಗತಿಯಲ್ಲಿ ಇವೆ ಎನ್ನುವುದನ್ನು ಏಪ್ರಿಲ್‌ ತಿಂಗಳ ಬೆಳವಣಿಗೆ ಸೂಚಿಸುತ್ತಿದೆ ಎಂದು ಹೇಳಿದೆ.

ಅಲ್ಪಾವಧಿಯಲ್ಲಿ ವಲಯದ ಬೆಳವಣಿಗೆಯು ಇದೇ ರೀತಿಯಲ್ಲಿ ಮುಂದುವರಿಯಲಿದೆ ಎನ್ನುವುದನ್ನು ಕಚ್ಚಾ ಸಾಮಗ್ರಿಗಳ ಖರೀದಿ ಮತ್ತು ಉತ್ಪನ್ನಗಳ ಮಾರಾಟದಲ್ಲಿ ಆಗುತ್ತಿರುವ ಹೆಚ್ಚಳವು ತೋರಿಸುತ್ತಿದೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ. ಲಿಮಾ ಹೇಳಿದ್ದಾರೆ.

ರಷ್ಯಾ–ಉಕ್ರೇನ್‌ ಸಂಘರ್ಷ ಮತ್ತು ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತಿರುವುದರಿಂದ ಹಣದುಬ್ಬರದ ಒತ್ತಡ ತೀವ್ರಗೊಳ್ಳುತ್ತಿದೆ.

ಹಣದುಬ್ಬರವು ಬೇಡಿಕೆ ಮೇಲೆ ತೀವ್ರ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಕಂಪನಿಗಳು ತಮ್ಮ ಮೇಲಿನ ಹೆಚ್ಚವರಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.