ADVERTISEMENT

ಅದಾನಿ ಸಮೂಹದ ಪರಿಶೀಲನೆ ಹೆಚ್ಚಿಸಿದ ಸೆಬಿ

ರಾಯಿಟರ್ಸ್
Published 27 ಜನವರಿ 2023, 18:25 IST
Last Updated 27 ಜನವರಿ 2023, 18:25 IST
   

ಮುಂಬೈ : ಅದಾನಿ ಸಮೂಹವು ಕಳೆದ ವರ್ಷದಲ್ಲಿ ನಡೆಸಿದ ವಹಿವಾಟುಗಳ ಪರಿಶೀಲನೆಯನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಇನ್ನಷ್ಟು ಹೆಚ್ಚಿಸಿದೆ. ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆ ಸಿದ್ಧಪಡಿಸಿರುವ ವರದಿಯನ್ನು ಕೂಡ ಸೆಬಿ ಪರಿಶೀಲಿಸಲಿದೆ.

ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಅದಾನಿ ಸಮೂಹದ ಕುರಿತು ಬುಧವಾರ ವರದಿಯೊಂದನ್ನು ಬಿಡುಗಡೆ ಮಾಡಿ, ಸಮೂಹದ ಸಾಲ ತೀರಾ ಹೆಚ್ಚಾಗಿದೆ ಎಂಬ ಕಳವಳವನ್ನು ವ್ಯಕ್ತಪಡಿಸಿದೆ. ಇದಾದ ನಂತರದಲ್ಲಿ, ಅದಾನಿ ಸಮೂಹದ ಷೇರುಪೇಟೆ ನೋಂದಾಯಿತ ಕಂಪನಿಗಳ ಷೇರುಗಳ ಮೌಲ್ಯವು ಭಾರಿ ಪ್ರಮಾಣದಲ್ಲಿ ಕುಸಿದಿದೆ.

‘ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಕಂಪನಿಗಳ ವಿಚಾರವಾಗಿ ಅದಾನಿ ಸಮೂಹ ನಡೆಸಿರುವ ಎಲ್ಲ ವಹಿವಾಟುಗಳನ್ನು ಸೆಬಿ ಹೆಚ್ಚೆಚ್ಚು ಪರಿಶೀಲಿಸುತ್ತಿದೆ’ ಎಂದು ಮೂಲಗಳು ತಿಳಿಸಿವೆ. ಸೆಬಿ, ತಾನು ಸಾಮಾನ್ಯ ಸಂದರ್ಭಗಳಲ್ಲಿ ಕೇಳದಿರುವಷ್ಟು ವಿವರಗಳನ್ನು ಕೇಳಲು ಆರಂಭಿಸಿದೆ.

ADVERTISEMENT

ಈ ವಿಚಾರವಾಗಿ ಅದಾನಿ ಸಮೂಹದಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಹಿಂಡನ್‌ಬರ್ಗ್‌ ರಿಸರ್ಚ್‌ನ ವರದಿಯನ್ನು ಅದಾನಿ ಸಮೂಹವು ಅಲ್ಲಗಳೆದಿದ್ದು, ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಿದೆ.

ಸ್ವಿಜರ್ಲೆಂಡ್‌ ಮೂಲದ ಹೋಲ್ಸಿಮ್‌ ಲಿಮಿಟೆಡ್‌, ಭಾರತದ ಅಂಬುಜಾ ಸಿಮೆಂಟ್ಸ್‌ ಲಿಮಿಟೆಡ್ ಮತ್ತು ಎಸಿಸಿ ಲಿಮಿಟೆಡ್‌ನಲ್ಲಿ ಹೊಂದಿದ್ದ ಷೇರುಗಳನ್ನು ಅದಾನಿ ಸಮೂಹವು ಸ್ವಾಧೀನಕ್ಕೆ ತೆಗೆದುಕೊಂಡ ವಹಿವಾಟುಗಳಲ್ಲಿ ಸಾಗರದಾಚೆಯ ಸಂಸ್ಥೆಗಳ ಪಾತ್ರವನ್ನು ಸೆಬಿ ಪರಿಶೀಲಿಸಿದೆ. ಈ ವಹಿವಾಟಿನಲ್ಲಿ ಸಾಗರದಾಚೆಯ ಸಂಸ್ಥೆಗಳ ಭಾಗವಹಿಸುವಿಕೆ ಬಗ್ಗೆ ಸಮೂಹವು ಮಾಹಿತಿ ನೀಡಿದೆ. ಒಟ್ಟು 17 ಸಂಸ್ಥೆಗಳು ಈ ವಹಿವಾಟಿಗೆ ಹಣ ಒದಗಿಸುವಲ್ಲಿ ಭಾಗಿಯಾಗಿರುವುದನ್ನು ಸೆಬಿ ಗುರುತಿಸಿದೆ.

ಈ ಸಂಸ್ಥೆಗಳ ಬಗ್ಗೆ ಸೆಬಿ ಸ್ಪಷ್ಟನೆ ಕೇಳಿತ್ತು. ಇದಕ್ಕೆ ಸಮೂಹ ನೀಡಿರುವ ವಿವರಣೆಗಳನ್ನು ಸೆಬಿ ಪರಿಶೀಲಿಸುತ್ತಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.