ADVERTISEMENT

ಬೇಡಿಕೆ ಹೆಚ್ಚಿಸುವ ಅಗತ್ಯವಿದೆ: ಪನಗರಿಯಾ

ಪಿಟಿಐ
Published 8 ಆಗಸ್ಟ್ 2020, 16:15 IST
Last Updated 8 ಆಗಸ್ಟ್ 2020, 16:15 IST
ಪನಗರಿಯಾ
ಪನಗರಿಯಾ   

ನವದೆಹಲಿ: ‘ದೇಶದ ಆರ್ಥಿಕತೆಯು ಚೇತರಿಸಿಕೊಳ್ಳಲು ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿಸುವ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ’ ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ ಪನಗರಿಯಾ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ. ಆದರೆ, ಸರಕುಗಳು ಸಂಗ್ರವು ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ಬೇಡಿಕೆಯ ಕೊರತೆ ಎದುರಾಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ. ಇಂತಹ ಸಂದರ್ಭದಲ್ಲಿ ಬೇಡಿಕೆಗೆ ಉತ್ತೇಜನ ನೀಡಬೇಕು ಎಂದು ಸಿಐಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.

ಕೊರೊನಾ ಬಿಕ್ಕಟ್ಟಿನಿಂದ ಹೊರಬರಲು ಕೇಂದ್ರ ಸರ್ಕಾರವು ಮೇನಲ್ಲಿ ₹ 21 ಲಕ್ಷ ಕೋಟಿ ಮೊತ್ತದ ಉತ್ತೇಜನ ಕೊಡುಗೆ ಪ್ರಕಟಿಸಿದೆ. ಕೋವಿಡ್‌–19 ಬರುವುದಕ್ಕೂ ಮೊದಲೇ ದೇಶದ ಆರ್ಥಿಕತೆ ಒತ್ತಡದಲ್ಲಿತ್ತು. 2019–20ರಲ್ಲಿ ಜಿಡಿಪಿ ಶೇ 4.2ರಷ್ಟು ಕಡಿಮೆ ಬೆಳವಣಿಗೆ ಕಂಡಿತ್ತು ಎಂದಿದ್ದಾರೆ.

ADVERTISEMENT

ದೊಡ್ಡ ಮೊತ್ತದ ವಿತ್ತೀಯ ಕೊಡುಗೆ ಘೋಷಣೆಯಿಂದ ಅಮೆರಿಕದ ಮತ್ತು ಯುರೋಪ್‌ನಲ್ಲಿ ಆಗಿರುವಷ್ಟು ಪ್ರಯೋಜನವು ಭಾರತದಲ್ಲಿ ಆಗಿಲ್ಲ ಎಂದು ಅವರು ಹೇಳಿದ್ದಾರೆ.

ಆತ್ಮನಿರ್ಭರ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ನೀವು ಉಪಭೋಗಿಸುವುದೆಲ್ಲವನ್ನೂ ತಯಾರಿಸಬೇಕು ಎಂದೇನೂ ಇಲ್ಲ. ಆಮದು ಪರ್ಯಾಯವು ಉತ್ತಮ ಯೋಚನೆ ಅಲ್ಲ. ಆತ್ಮನಿರ್ಭರದಿಂದಾಗಿ ಆಮದು ಪರ್ಯಾಯ ನೀತಿ ರೂಪಿಸುವ ಪ್ರಕ್ರಿಯೆಗೆ ವೇಗ ದೊರೆತಿದೆ ಎಂದು ನಾನು ಭಾವಿಸುವುದಿಲ್ಲ. ಆಮದು ಪರವಾನಗಿ ಮತ್ತೆ ಬಂದಿದೆ ಎಂದು ಕೆಲವರು ನನಗೆ ಹೇಳಿದ್ದಾರೆ. ಆದರೆ, ವಾಸ್ತವದಲ್ಲಿ ಆಮದು ಪರವಾನಗಿ ಜಾರಿಯಾಗಿರುವ ಯಾವುದೇ ವರದಿಗಳು ನನಗೆ ಕಂಡಿಲ್ಲ. ಒಂದೊಮ್ಮೆ ಜಾರಿಗೊಳಿಸಿದ್ದೇ ಆದರೆ ವಿಶ್ವ ವ್ಯಾಪಾರ ಸಂಘಟನೆಯೊಂದಿಗೆ (ಡಬ್ಲ್ಯುಟಿಒ) ನಾವು ಮಾಡಿಕೊಂಡಿರುವ ಒಪ್ಪಂದಗಳ ಉಲ್ಲಂಘನೆಯಾಗಲಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಆಮದು ಸುಂಕ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.