ನವದೆಹಲಿ: ಕೃಷಿ ಉತ್ಪನ್ನಗಳ ಮೇಲಿನ ಸುಂಕ ಕಡಿತಗೊಳಿಸುವ ಬಗ್ಗೆ ಅಮೆರಿಕದ ವ್ಯಾಪಾರ ಪ್ರತಿನಿಧಿಗಳಿಗೆ ಭಾರತವು ಭರವಸೆ ನೀಡಿದೆ.
ಭಾರತದ ಸರಕುಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಪ್ರತಿ ಸುಂಕ ನೀತಿಯು ಮುಂದಿನ ವಾರದಿಂದ ಜಾರಿಗೆ ಬರಲಿದೆ. ಇದರಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಕಾರ್ಯತಂತ್ರ ಹೆಣೆಯುತ್ತಿದೆ. ಇದರ ಭಾಗವಾಗಿ ಸುಂಕ ಕಡಿತದತ್ತ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗಿದೆ.
ಚೀನಾ, ಕೆನಡಾ ಮತ್ತು ಯೂರೋಪ್ ಒಕ್ಕೂಟವು ಅಮೆರಿಕದ ಸುಂಕ ನೀತಿಗೆ ಮಣಿದಿಲ್ಲ. ಆದರೆ, ಕೇಂದ್ರವು ಟ್ರಂಪ್ ಆಡಳಿತವನ್ನು ಸಮಾಧಾನಪಡಿಸಲು ಕಸರತ್ತು ನಡೆಸಿದೆ. ಹಾಗಾಗಿ, ಅಲ್ಲಿಂದ ಆಮದಾಗುವ ಅರ್ಧಕ್ಕಿಂತ ಹೆಚ್ಚು (ಶೇ 55) ಸರಕುಗಳ ಮೇಲಿನ ಸುಂಕ ಕಡಿತಗೊಳಿಸಲು ಮುಂದಾಗಿದೆ. ಇದರ ಒಟ್ಟು ಮೌಲ್ಯ ₹1.96 ಲಕ್ಷ ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ.
ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಒಪ್ಪಂದದ ಭಾಗವಾಗಿ ದಕ್ಷಿಣ ಮತ್ತು ಸೆಂಟ್ರಲ್ ಏಷ್ಯಾದ ಪ್ರತಿನಿಧಿಯಾದ ಬ್ರೆಂಡನ್ ಲಿಂಚ್ ಜೊತೆಗೆ ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಸಚಿವಾಲಯವು ಸರಣಿ ಸಭೆಗಳನ್ನು ನಡೆಸಿದೆ. ಈ ವೇಳೆ ಬಾದಾಮಿ, ವಾಲ್‌ನಟ್, ಕ್ರ್ಯಾನ್‌ಬೆರಿ, ಪಿಸ್ತಾ ಮತ್ತು ಚೆನ್ನಂಗಿ ಬೇಳೆ ಮೇಲಿನ ಸುಂಕ ಕಡಿತಗೊಳಿಸುವುದಾಗಿ ಮನವರಿಕೆ ಮಾಡಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೃಷಿ ವಲಯ ಸೇರಿ ಇತರೆ ವಲಯಗಳ ಸರಕುಗಳ ಮೇಲೆ ವಿಧಿಸುತ್ತಿರುವ ಸುಂಕವನ್ನೂ ಕಡಿತಗೊಳಿಸುವ ಬಗ್ಗೆ ಸರ್ಕಾರ ಒಲವು ತೋರಿದೆ ಎಂದು ಹೇಳಿವೆ.
ಆದರೆ, ಈ ಬಗ್ಗೆ ಕೇಂದ್ರ ವ್ಯಾಪಾರ ಸಚಿವಾಲಯವು ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಹೈನು ಉತ್ಪನ್ನ, ಅಕ್ಕಿ, ಗೋಧಿ, ಮೆಕ್ಕೆಜೋಳದ ಮೇಲೆ ಕಡಿಮೆ ಪ್ರಮಾಣದಲ್ಲಿ ಸುಂಕ ನಿಗದಿಪಡಿಸಿರುವ ಬಗ್ಗೆ ಸರ್ಕಾರಿ ವಲಯದಲ್ಲಿಯೇ ಅಸಮಾಧಾನವಿದೆ ಎಂದು ಮೂಲಗಳು ಹೇಳಿವೆ. ಮತ್ತೊಂದೆಡೆ ಅಮೆರಿಕಕ್ಕೆ ಅಕ್ಕಿ ಪೂರೈಸುವ ಬದಲಿಗೆ ದಾಳಿಂಬೆ ಹಾಗೂ ದ್ರಾಕ್ಷಿಗೆ ಅಲ್ಲಿನ ಮಾರುಕಟ್ಟೆಯಲ್ಲಿ ಅವಕಾಶ ಕಲ್ಪಿಸಿಕೊಳ್ಳುವ ಬಗ್ಗೆ ಎದುರು ನೋಡುತ್ತಿದೆ ಎಂದು ಹೇಳಿವೆ.
ಈ ಕುರಿತು ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಚೌಕಟ್ಟು ರೂಪಿಸಲಾಗುತ್ತದೆ. ಸೆಪ್ಟೆಂಬರ್ ವೇಳೆಗೆ ಇದು ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿವೆ.
ಸುಂಕ ಎಷ್ಟು?
ಕೇಂದ್ರ ಸರ್ಕಾರವು ಕಳೆದ ತಿಂಗಳು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಬಾರ್ಬನ್ ವಿಸ್ಕಿ ಮೇಲಿನ ಸುಂಕವನ್ನು ಶೇ 150ರಿಂದ ಶೇ 100ಕ್ಕೆ ತಗ್ಗಿಸಿದೆ. ಕ್ರ್ಯಾನ್‌ಬೆರಿ ಬಾದಾಮಿ ವಾಲ್‌ನಟ್ ಮೇಲೆ ಶೇ 30ರಿಂದ ಶೇ 100ರಷ್ಟು ಹಾಗೂ ಚೆನ್ನಂಗಿ ಬೇಳೆ ಮೇಲೆ ಶೇ 10ರಷ್ಟು ಸುಂಕ ವಿಧಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.