ADVERTISEMENT

ಗಿಗ್ ಕೆಲಸಗಾರರಿಗೆ ಪಿಂಚಣಿ: ಪಿಎಫ್‌ಆರ್‌ಡಿಎ ಶಿಫಾರಸು

ರಾಯಿಟರ್ಸ್
Published 27 ಡಿಸೆಂಬರ್ 2022, 15:40 IST
Last Updated 27 ಡಿಸೆಂಬರ್ 2022, 15:40 IST
   

ರಾಯಿಟರ್ಸ್: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ದೇಶದ ಗಿಗ್ ಕೆಲಸಗಾರರಿಗೆ ಬ್ರಿಟನ್ ಮಾದರಿಯಲ್ಲಿ ಪಿಂಚಣಿ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದು ಜಾರಿಗೆ ಬಂದಲ್ಲಿ, ಶೇಕಡ 90ರಷ್ಟು ಕಾರ್ಮಿಕರು ಪಿಂಚಣಿ ವ್ಯವಸ್ಥೆಯ ಅಡಿ ಬಂದಂತಾಗುತ್ತದೆ.

ಆಹಾರ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ಗಿಗ್ ಕೆಲಸಗಾರರು ಹಾಗೂ ಕ್ಯಾಬ್ ಸೇವೆ ಒದಗಿಸುವ ಕಂಪನಿಗಳ ಜೊತೆ ಕೆಲಸ ಮಾಡುವ ಗಿಗ್ ಕೆಲಸಗಾರರು ರಾಷ್ಟ್ರೀಯ ‍ಪಿಂಚಣಿ ಯೋಜನೆಯ (ಎನ್‌ಪಿಎಸ್‌) ವ್ಯಾಪ್ತಿಗೆ ಬರುವಂತೆ ಮಾಡಬೇಕು ಎಂದು ಪಿಎಫ್‌ಆರ್‌ಡಿಎ ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಸುಪ್ರತಿಮ್ ಬಂದ್ಯೋಪಾಧ್ಯಾಯ ತಿಳಿಸಿದ್ದಾರೆ.

ಸರ್ಕಾರಿ, ಖಾಸಗಿ ಹಾಗೂ ಅಸಂಘಟಿತ ವಲಯದ 1.67 ಕೋಟಿ ಜನ ಈಗ ಎನ್‌ಪಿಎಸ್‌ ಚಂದಾದಾರರು. ಗಿಗ್ ಕೆಲಸಗಾರರಿಗೆ ನೀಡುವ ಪಾವತಿಯಲ್ಲಿ ಒಂದು ಪಾಲನ್ನು ಕಂಪನಿಗಳು ಮುರಿದುಕೊಂಡು ಆ ಮೊತ್ತವನ್ನು ಎನ್‌ಪಿಎಸ್‌ ಯೋಜನೆಗೆ ಕೊಡುವಂತೆ ಆಗಬೇಕು ಎಂಬುದು ಪ್ರಾಧಿಕಾರದ ಶಿಫಾರಸು.

ADVERTISEMENT

ಅಸಂಘಟಿತ ವಲಯವು ದೇಶದ ಶೇಕಡ 90ರಷ್ಟು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿದೆ. ಈ ವಲಯದಲ್ಲಿ ಕೆಲಸ ಮಾಡುವ ಹೆಚ್ಚಿನವರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಸಿಗುತ್ತಿಲ್ಲ.

ಗಿಗ್ ಕೆಲಸಗಾರರಲ್ಲಿ ಹೆಚ್ಚಿನವರು ಡೆಲಿವರಿ ಏಜೆಂಟ್‌ಗಳಾಗಿ, ಮಾರಾಟ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿದ್ದಾರೆ. ನೀತಿ ಆಯೋಗದ ಅಂದಾಜಿನ ಪ್ರಕಾರ ಇವರ ಸಂಖ್ಯೆಯು 2022–23ರಲ್ಲಿ 99 ಕೋಟಿಗೆ ತಲುಪಲಿದೆ.

ಬ್ರಿಟನ್‌ನಲ್ಲಿ ಇರುವ ವ್ಯವಸ್ಥೆಯ ಪ್ರಕಾರ, ಒಬ್ಬನೇ ಕೆಲಸಗಾರ ಇದ್ದರೂ ಕಂಪನಿಯು ಆತನನ್ನು ಪಿಂಚಣಿ ಯೋಜನೆಗೆ ಸೇರಿಸಬೇಕು ಹಾಗೂ ಆ ಕೆಲಸಗಾರನ ಹೆಸರಲ್ಲಿ ಪಿಂಚಣಿ ಯೋಜನೆಗೆ ವಂತಿಗೆ ನೀಡಬೇಕು.

ಎನ್‌ಪಿಎಸ್‌ ಯೋಜನೆಯನ್ನು ಇನ್ನಷ್ಟು ಆಕರ್ಷಕವಾಗಿಸಲು ಕೇಂದ್ರವು ಈ ಯೋಜನೆಯ ಅಡಿ ಮಾಡುವ ಹೂಡಿಕೆಗೆ ನೀಡುವ ಆದಾಯ ತೆರಿಗೆ ವಿನಾಯಿತಿಯನ್ನು ₹ 1 ಲಕ್ಷಕ್ಕೆ ಹೆಚ್ಚಿಸಬೇಕು ಎಂದೂ ಶಿಫಾರಸು ಮಾಡಲಾಗಿದೆ ಎಂದು ಬಂದ್ಯೋಪಾಧ್ಯಾಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.