ADVERTISEMENT

ಸೌದಿಯಿಂದ ಆಮದು ತಗ್ಗಿಸಲು ಭಾರತದ ತೈಲ ಕಂಪನಿಗಳ ಚಿಂತನೆ

ರಾಯಿಟರ್ಸ್
Published 17 ಮಾರ್ಚ್ 2021, 12:03 IST
Last Updated 17 ಮಾರ್ಚ್ 2021, 12:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಭಾರತದ ಕಚ್ಚಾ ತೈಲ ಸಂಸ್ಕರಣಾ ಕಂಪನಿಗಳು ಸೌದಿ ಅರೇಬಿಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವನ್ನು ಮೇ ತಿಂಗಳಿನಲ್ಲಿ ಶೇಕಡ 25ರಷ್ಟು ಕಡಿಮೆ ಮಾಡಲು ಚಿಂತನೆ ನಡೆಸಿವೆ.

ಕಚ್ಚಾ ತೈಲ ಪೂರೈಕೆಯನ್ನು ಹೆಚ್ಚಿಸಬೇಕು ಎಂದು ಭಾರತ ಮಾಡಿಕೊಂಡ ಮನವಿಗೆ ಸೌದಿ ಅರೇಬಿಯಾ ಮನ್ನಣೆ ನೀಡಿಲ್ಲ. ಈಗ ತೈಲ ಸಂಸ್ಕರಣಾ ಕಂಪನಿಗಳು ಹೊಂದಿರುವ ಆಲೋಚನೆಯು, ಮಧ್ಯಪ್ರಾಚ್ಯದಿಂದ ತೈಲ ಆಮದು ಪ್ರಮಾಣ ತಗ್ಗಿಸಬೇಕು ಎಂದು ಸರ್ಕಾರ ಕೈಗೊಂಡಿರುವ ತೀರ್ಮಾನದ ಒಂದು ಭಾಗ ಎಂದು ಮೂಲಗಳು ವಿವರಿಸಿವೆ.

ಇಂಡಿಯನ್‌ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್), ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ಮತ್ತು ಎಂಆರ್‌ಪಿಎಲ್‌ ಕಂಪನಿಗಳು ಮೇ ತಿಂಗಳಿನಲ್ಲಿ ಒಟ್ಟು ಅಂದಾಜು 1.08 ಕೋಟಿ ಬ್ಯಾರೆಲ್‌ ಕಚ್ಚಾ ತೈಲ ತರಿಸಿಕೊಳ್ಳಲು ಸಿದ್ಧತೆ ನಡೆಸಿವೆ. ಸಾಮಾನ್ಯವಾಗಿ, ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು ಸೌದಿ ಅರೇಬಿಯಾದಿಂದ ಪ್ರತಿ ತಿಂಗಳು ಸರಾಸರಿ 1.47 ಕೋಟಿಯಿಂದ 1.48 ಕೋಟಿ ಬ್ಯಾರಲ್‌ನಷ್ಟು ಕಚ್ಚಾ ತೈಲವನ್ನು ತರಿಸಿಕೊಳ್ಳುತ್ತವೆ.

ADVERTISEMENT

ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟ (ಒಪೆಕ್) ಮತ್ತು ಆ ದೇಶಗಳ ಮಿತ್ರದೇಶಗಳ ಸಂಘಟನೆಯು (ಒಪೆಕ್‌+) ತೈಲ ಪೂರೈಕೆಯನ್ನು ಹೆಚ್ಚಿಸಬೇಕು ಎಂದು ಭಾರತ ಮತ್ತೆ ಮತ್ತೆ ಮನವಿ ಮಾಡಿಕೊಂಡಿತ್ತು. ಆದರೆ ಒಪೆಕ್‌+ ಒಕ್ಕೂಟವು ಏಪ್ರಿಲ್‌ ತಿಂಗಳಿನಲ್ಲಿಯೂ ತೈಲೋತ್ಪಾದನೆ ಹೆಚ್ಚಿಸದಿರಲು ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.