
ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ದೇಶದ ಚಿಲ್ಲರೆ ಹಣದುಬ್ಬರವು ಆಗಸ್ಟ್ ತಿಂಗಳಿನಲ್ಲಿ ಶೇ 2.07ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಶುಕ್ರವಾರ ತಿಳಿಸಿದೆ.
ಚಿಲ್ಲರೆ ಹಣದುಬ್ಬರ ಪ್ರಮಾಣವು ಜುಲೈನಲ್ಲಿ ಶೇ 1.61ರಷ್ಟಿತ್ತು. 2024ರ ಆಗಸ್ಟ್‌ನಲ್ಲಿ ಶೇ 3.65ರಷ್ಟಿತ್ತು. 9 ತಿಂಗಳಿನಿಂದ ಇಳಿಕೆ ಕಂಡಿದ್ದ ಹಣದುಬ್ಬರವು ಈಗ ಏರಿಕೆಯಾಗಿದೆ. ನವೆಂಬರ್‌ನಲ್ಲಿ ಶೇ 5.48 ದಾಖಲಾಗಿತ್ತು.
ತರಕಾರಿಗಳು, ಮಾಂಸ, ಮೀನು, ಮೊಟ್ಟೆ, ಎಣ್ಣೆ ಮತ್ತು ವೈಯಕ್ತಿಕ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಹಣದುಬ್ಬರ ಏರಿಕೆಯಾಗಿದೆ ಎಂದು ತಿಳಿಸಿದೆ.
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 4ರ ಹಂತದಲ್ಲಿ ಇರಬೇಕು, ಅದು ಶೇ 2ಕ್ಕಿಂತ ಕಡಿಮೆ ಆಗಬಾರದು ಎಂಬುದು ಆರ್‌ಬಿಐಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಗುರಿ.
ದೇಶದ ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರವು ಜುಲೈನಲ್ಲಿ ಶೇ 1.18ರಷ್ಟಿತ್ತು. ಆಗಸ್ಟ್‌ನಲ್ಲಿ ಶೇ 1.69ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ನಗರ ಪ್ರದೇಶದಲ್ಲಿ ಶೇ 2.1ರಿಂದ ಶೇ 2.47ಕ್ಕೆ ಹೆಚ್ಚಳವಾಗಿದೆ.
‘ಆಹಾರ ಮತ್ತು ಪಾನೀಯ ವಿಭಾಗದ ವಸ್ತುಗಳ ದರದಲ್ಲಿನ ಹೆಚ್ಚಳದಿಂದ ಹಣದುಬ್ಬರವು ಆಗಸ್ಟ್‌ನಲ್ಲಿ ಹೆಚ್ಚಾಗಿದೆ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ. ಇತ್ತೀಚೆಗೆ ಸುರಿದ ಹೆಚ್ಚಿನ ಮಳೆ ಮತ್ತು ದೇಶದ ಕೆಲವು ಭಾಗದಲ್ಲಿ ಉಂಟಾದ ಪ್ರವಾಹವು ಬೆಳೆಯ ಇಳುವರಿ ಮೇಲೆ ಪರಿಣಾಮ ಬೀರಬಹುದು. ಇದರಿಂದ ದರವು ಹೆಚ್ಚಳವಾಗಬಹುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.