ನವದೆಹಲಿ: ಕೇಂದ್ರವು ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯಗಳಿಗೆ ನೀಡುವ ಪಾಲನ್ನು ಈಗಿನ ಶೇ 41ರಿಂದ ಶೇ 40ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಹಣಕಾಸು ಆಯೋಗಕ್ಕೆ ಕೋರಿಕೆ ಸಲ್ಲಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ತೆರಿಗೆ ಪಾಲು ಕಡಿತಗೊಳಿಸುವ ನಿರ್ಧಾರವು ಕಾರ್ಯರೂಪಕ್ಕೆ ಬಂದರೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ಜಟಾಪಟಿಗೆ ಕಾರಣವಾಗುವ ಸಾಧ್ಯತೆಯಿದೆ.
ಅರ್ಥಶಾಸ್ತ್ರಜ್ಞ ಅರವಿಂದ ಪನಗರಿಯಾ ನೇತೃತ್ವದ ಹಣಕಾಸು ಆಯೋಗವು ತನ್ನ ಶಿಫಾರಸುಗಳನ್ನು ಇದೇ ಅಕ್ಟೋಬರ್ 31ರೊಳಗೆ ಸರ್ಕಾರಕ್ಕೆ ಸಲ್ಲಿಸಲಿದ್ದು, 2026-27ರ ಆರ್ಥಿಕ ವರ್ಷದಿಂದ ಜಾರಿಗೆ ಬರಲಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟವು ಮಾರ್ಚ್ ಅಂತ್ಯದ ವೇಳೆಗೆ ಕೋರಿಕೆಗಳಿಗೆ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡುವ ತೆರಿಗೆಯ ಪಾಲು 1980ರಲ್ಲಿ ಶೇ 20ರಷ್ಟು ಇದ್ದದ್ದು, ಈಗ ಶೇ 41ಕ್ಕೆ ಜಿಗಿದಿದೆ.
ಆದರೆ ಕೇಂದ್ರ ಸರ್ಕಾರದ ವೆಚ್ಚದ ಪ್ರಮಾಣ, ವಿಶೇಷವಾಗಿ ಆರ್ಥಿಕ ಹಿಂಜರಿತದ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಾಗಿದೆ. ಇದರಿಂದ ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ತಗ್ಗಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ. 2024–25ರಲ್ಲಿ ದೇಶದ ವಿತ್ತೀಯ ಕೊರತೆಯು ಜಿಡಿಪಿಯ ಶೇ 4.8ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯಗಳ ವಿತ್ತೀಯ ಕೊರತೆ ಶೇ 3.2ರಷ್ಟಿದೆ.
ರಾಜ್ಯಗಳಿಗೆ ನೀಡುವ ಪಾಲನ್ನು ಶೇ 1ರಷ್ಟು ಕಡಿತಗೊಳಿಸುವ ನಿರ್ಧಾರದ ಬಗ್ಗೆ ಸ್ಪಷ್ಟನೆ ಕೋರಿ ಹಣಕಾಸು ಸಚಿವಾಲಯ ಮತ್ತು ಹಣಕಾಸು ಆಯೋಗಕ್ಕೆ ಇ–ಮೇಲ್ ಕಳುಹಿಸಿದರೂ, ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ.
₹35 ಸಾವಿರ ಕೋಟಿ ಉಳಿಕೆ
ರಾಜ್ಯಗಳಿಗೆ ನೀಡುವ ತೆರಿಗೆ ಪಾಲಿನಲ್ಲಿ ಶೇ 1ರಷ್ಟು ಕಡಿತಗೊಳಿಸಿದರೆ ಕೇಂದ್ರ ಸರ್ಕಾರದ ಬಳಿ ₹35 ಸಾವಿರ ಕೋಟಿ ಉಳಿಯಲಿದೆ. ಪ್ರಸಕ್ತ ವರ್ಷದ ನಿರೀಕ್ಷಿತ ತೆರಿಗೆ ಸಂಗ್ರಹದ ಆಧಾರದ ಮೇಲೆ ಈ ಲೆಕ್ಕಾಚಾರ ಮಾಡಲಾಗಿದೆ. ತೆರಿಗೆ ಸಂಗ್ರಹದ ಮೊತ್ತ ಬದಲಾದಂತೆ, ಕೇಂದ್ರ ಸರ್ಕಾರದ ಬಳಿ ಉಳಿಯುವ ಮೊತ್ತದಲ್ಲೂ ಬದಲಾವಣೆ ಉಂಟಾಗಬಹುದು.
ಉಚಿತ ಕೊಡುಗೆ; ಅನುದಾನ ಇಲ್ಲ?
ಕೆಲವು ರಾಜ್ಯ ಸರ್ಕಾರಗಳು ಮಾಸಿಕ ನಗದು ನೆರವು, ಸಾಲ ಮನ್ನಾ ಮತ್ತು ಇತರ ಉಚಿತ ಯೋಜನೆ ಜಾರಿಗೊಳಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಆದರೆ, ಜನರಿಗೆ ಉಚಿತ ಯೋಜನೆಗಳನ್ನು ನೀಡುತ್ತಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಅನುದಾನವನ್ನು ನಿರಾಕರಿಸಲಿದೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಕೆಲವು ಷರತ್ತುಗಳನ್ನು ವಿಧಿಸಿ, ಅವುಗಳನ್ನು ಪೂರೈಸಿದ ಬಳಿಕವೇ ರಾಜ್ಯಗಳಿಗೆ ಅನುದಾನ ಬಿಡುಗಡೆಗೊಳಿಸುವ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರವು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.