ADVERTISEMENT

ಅಡುಗೆ ಎಣ್ಣೆ ಆಮದು ಶೇ 25 ಇಳಿಕೆ

ಪಿಟಿಐ
Published 15 ಡಿಸೆಂಬರ್ 2023, 15:25 IST
Last Updated 15 ಡಿಸೆಂಬರ್ 2023, 15:25 IST
ಅಡುಗೆ ಎಣ್ಣೆ
ಅಡುಗೆ ಎಣ್ಣೆ   

ನವದೆಹಲಿ: ದೇಶದಲ್ಲಿ ಅಡುಗೆ ಎಣ್ಣೆ ಆಮದು 2023–24ರ ತೈಲ ವರ್ಷದ (ನವೆಂಬರ್–ಅಕ್ಟೋಬರ್‌) ಮೊದಲ ತಿಂಗಳಾದ ನವೆಂಬರ್‌ನಲ್ಲಿ ಶೇ 25ರಷ್ಟು ಇಳಿಕೆಯಾಗಿ, 11.60 ಲಕ್ಷ ಟನ್‌ಗೆ ತಲುಪಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ 15.45 ಲಕ್ಷ ಟನ್ ಇತ್ತು ಎಂದು ಸಾಲ್ವೆಂಟ್‌ ಎಕ್ಸ್‌ಟ್ರಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎಸ್‌ಇಎ) ಶುಕ್ರವಾರ ತಿಳಿಸಿದೆ.

ಕಚ್ಚಾ ತಾಳೆ ಎಣ್ಣೆ, ಸೋಯಾಬಿನ್‌ ಎಣ್ಣೆ ಮತ್ತು ಸೂರ್ಯಕಾಂತಿ ಕಚ್ಚಾ ಎಣ್ಣೆ ಆಮದು ಕೂಡ ಇಳಿಕೆ ಕಂಡಿದೆ. ನವೆಂಬರ್‌ನಲ್ಲಿ ಆಮದಾದ ಒಟ್ಟು ತೈಲದಲ್ಲಿ ಅಡುಗೆ ಎಣ್ಣೆ 11.48 ಲಕ್ಷ ಟನ್‌ ಮತ್ತು ಅಡುಗೇತರ ಎಣ್ಣೆ 12,498 ಟನ್‌ ಆಗಿದೆ. ಭಾರತವು ವಿಶ್ವದಲ್ಲೇ ಪ್ರಮುಖ ಅಡುಗೆ ಎಣ್ಣೆ ಖರೀದಿದಾರ ದೇಶವಾಗಿದ್ದು, ರಿಫೈನ್ಡ್‌ ಮತ್ತು ಕಚ್ಚಾ ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. 

ADVERTISEMENT

ಎಸ್‌ಇಎ ಪ್ರಕಾರ, ನವೆಂಬರ್‌ನಲ್ಲಿ ದೇಶದಲ್ಲಿ ಕಚ್ಚಾ ಅಡುಗೆ ಎಣ್ಣೆ ಶೇ 26.34ರಷ್ಟು ಇಳಿಕೆಯಾಗಿ 9.77 ಲಕ್ಷ ಟನ್‌ಗೆ ತಲುಪಿದೆ. ಹಿಂದಿನ ಇದೇ ಅವಧಿಯಲ್ಲಿ 13.26 ಲಕ್ಷ ಟನ್‌ ಇತ್ತು.

ರಿಫೈನ್ಡ್‌ (ಸಂಸ್ಕರಿಸಿದ) ಅಡುಗೆ ಎಣ್ಣೆಯ ರಫ್ತು ಕೂಡ ಹಿಂದಿನ ವರ್ಷದ ನವೆಂಬರ್‌ಗೆ ಹೋಲಿಸಿದರೆ 2.02 ಲಕ್ಷ ಟನ್‌ನಿಂದ ಪ್ರಸಕ್ತ ವರ್ಷಕ್ಕೆ ಶೇ 15.41ರಷ್ಟು ಇಳಿಕೆಯಾಗಿ 1.71 ಲಕ್ಷ ಟನ್‌ಗೆ ತಲುಪಿದೆ. 

ಆರ್‌ಬಿಡಿ ಪಾಮೊಲಿನ್‌ ಆಮದು ನವೆಂಬರ್‌ನಲ್ಲಿ 1.71 ಲಕ್ಷ ಟನ್‌ ಆಗಿದ್ದು, ಹಿಂದಿನ ಇದೇ ಅವಧಿಯಲ್ಲಿ 2.02 ಲಕ್ಷ ಟನ್‌ ಇತ್ತು. ಆದರೆ, ಸಾಗಣೆಯು ಪ್ರಸಕ್ತ ಅಕ್ಟೋಬರ್‌ನಲ್ಲಿ 53,497 ಟನ್‌ಗಳಿಂದ ಮೂರು ಪಟ್ಟು ಏರಿಕೆಯಾಗಿದೆ.

ಕಚ್ಚಾ ತಾಳೆ ಎಣ್ಣೆ ಆಮದು 9.31 ಲಕ್ಷ ಟನ್‌ನಿಂದ 6.92 ಲಕ್ಷ ಟನ್‌ಗೆ ಇಳಿಕೆ ಆಗಿದೆ ಎಂದು ಎಸ್‌ಇಎ ಅಂಕಿ–ಅಂಶಗಳು ತಿಳಿಸಿವೆ. ಸೂರ್ಯಕಾಂತಿ ಕಚ್ಚಾ ಎಣ್ಣೆ ಆಮದು 1.57 ಲಕ್ಷ ಟನ್‌ನಿಂದ 1.28 ಲಕ್ಷ ಟನ್‌ಗೆ ಹಾಗೂ ಸೋಯಾಬಿನ್‌ ಕಚ್ಚಾ ಎಣ್ಣೆ 2.29 ಲಕ್ಷ ಟನ್‌ನಿಂದ 1.49 ಲಕ್ಷ ಟನ್‌ಗೆ ಕಡಿಮೆ ಆಗಿದೆ. 

ಡಿಸೆಂಬರ್‌ 1ರಂತೆ ಅಡುಗೆ ಎಣ್ಣೆ ದಾಸ್ತಾನು 29.60 ಲಕ್ಷ ಟನ್‌ಗಳಾಗಿದ್ದು, ಹಿಂದಿನ ತಿಂಗಳಿಗಿಂತ 1.79 ಲಕ್ಷ ಟನ್‌ಗಳಷ್ಟು ಕಡಿಮೆಯಾಗಿದೆ. ಭಾರತವು ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ತಾಳೆ ಎಣ್ಣೆ, ಅರ್ಜೆಂಟೀನಾದಿಂದ ಸೋಯಾಬಿನ್‌, ಉಕ್ರೇನ್‌ ಮತ್ತು ರಷ್ಯಾದಿಂದ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಕಚ್ಚಾ ತಾಳೆ ಎಣ್ಣೆ (ಸಿಪಿಒ) ಮತ್ತು ರಿಫೈನ್ಡ್‌ ಎಣ್ಣೆ ನಡುವಿನ ಪ್ರಸ್ತುತ ಪರಿಣಾಮಕಾರಿ ಆಮದು ಸುಂಕದ ಶೇ 8.25 ವ್ಯತ್ಯಾಸವು ಸಿಪಿಒಗೆ ವಿರುದ್ಧವಾಗಿ ದೇಶಕ್ಕೆ ರಿಫೈನ್ಡ್‌ ಪಾಮೊಲಿನ್ ಆಮದುಗಳನ್ನು ಉತ್ತೇಜಿಸುತ್ತದೆ ಎಂದು ಎಸ್‌ಇಎ ಹೇಳಿದೆ. ಈ ಸಿದ್ಧಪಡಿಸಿದ ಸರಕುಗಳ ಆಮದು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ದೇಶದ ತಾಳೆ ಸಂಸ್ಕರಣಾ ಉದ್ಯಮದ ಸಾಮರ್ಥ್ಯದ ಬಳಕೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.

ಪಾಮೊಲಿನ್‌ ರಫ್ತು ಮಾಡುವ ದೇಶಗಳು (ಮಲೇಷ್ಯಾ ಮತ್ತು ಇಂಡೋನೇಷ್ಯಾ) ತಮ್ಮ ದೇಶದ ಕೈಗಾರಿಕೆಗಳಿಗೆ ನೀಡುತ್ತಿರುವ ಪ್ರೋತ್ಸಾಹವೇ ಪಾಮೊಲಿನ್‌ ಆಮದು ಹೆಚ್ಚಳವಾಗಲು ಕಾರಣವಾಗಿದೆ. ಕಚ್ಚಾ ತಾಳೆ ಮೇಲೆ ಹೆಚ್ಚಿನ ರಫ್ತು ಸುಂಕ ಮತ್ತು ರಿಫೈನ್ಡ್‌ ಪಾಮೊಲಿನ್‌ ಮೇಲೆ ಕಡಿಮೆ ರಫ್ತು ಸುಂಕ ವಿಧಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಎಸ್‌ಇಎ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.