ADVERTISEMENT

ಸೇವಾ ವಲಯದ ಚಟುವಟಿಕೆಗಳಲ್ಲಿ ಹತ್ತೂವರೆ ವರ್ಷಗಳ ವೇಗದ ಬೆಳವಣಿಗೆ

ಪಿಟಿಐ
Published 3 ನವೆಂಬರ್ 2021, 11:55 IST
Last Updated 3 ನವೆಂಬರ್ 2021, 11:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಅಕ್ಟೋಬರ್‌ ತಿಂಗಳಿನಲ್ಲಿ ಕಳೆದ ಹತ್ತೂವರೆ ವರ್ಷಗಳ ಅತಿ ವೇಗದ ಬೆಳವಣಿಗೆ ಕಂಡಿವೆ ಎಂದು ಐಎಚ್‌ಎಸ್‌ ಮರ್ಕಿಟ್‌ ಸಂಸ್ಥೆ ಬುಧವಾರ ಹೇಳಿದೆ.

ಬೇಡಿಕೆಯು ಸುಧಾರಿಸಿರುವುದರಿಂದ ವ್ಯಾಪಾರ ಚಟುವಟಿಕೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಅದು ಹೇಳಿದೆ. ಹಣದುಬ್ಬರದ ಆತಂಕದಿಂದಾಗಿ ವ್ಯಾಪಾರ ನಡೆಸುವ ವಿಶ್ವಾಸವು ಮಂದಗತಿಯಲ್ಲಿ ಇದ್ದರೂ ಹೊಸ ವ್ಯಾಪಾರಗಳಲ್ಲಿನ ಏರಿಕೆಯಿಂದಾಗಿ ಸೇವಾ ವಲಯದ ಚಟುವಟಿಕೆ ವೇಗ ಪಡೆದುಕೊಂಡಿದೆ. ಇದರಿಂದಾಗಿ ಹೆಚ್ಚಿನ ಉದ್ಯೋಗವೂ ಸೃಷ್ಟಿಯಾಗಿದೆ ಎಂದು ಸಂಸ್ಥೆ ಹೇಳಿದೆ.

ಸೇವಾ ವಲಯದ ಚಟುವಟಿಕೆಗಳನ್ನು ಸೂಚಿಸುವ ಸೂಚ್ಯಂಕವು ಸೆಪ್ಟೆಂಬರ್‌ನಲ್ಲಿ 55.2ರಷ್ಟು ಇದ್ದಿದ್ದು, ಅಕ್ಟೋಬರ್‌ನಲ್ಲಿ 58.4ಕ್ಕೆ ಏರಿಕೆ ಕಂಡಿದೆ ಎಂದು ಅದು ಹೇಳಿದೆ. ಸತತ ಮೂರನೇ ತಿಂಗಳಿನಲ್ಲಿಯೂ ಸೇವಾ ವಲಯದ ಚಟುವಟಿಕೆಗಳಲ್ಲಿ ಏರಿಕೆ ಕಂಡುಬಂದಿದೆ.

ADVERTISEMENT

ವೆಚ್ಚವು ಗಣನೀಯವಾಗಿ ಹೆಚ್ಚುತ್ತಲೇ ಇದೆ. ಇಂಧನ ದರ, ಲೋಹಗಳು, ಸಾರಿಗೆ ವೆಚ್ಚದಲ್ಲಿ ಏರಿಕೆ ಆಗುತ್ತಿದೆ. ಹಣದುಬ್ಬರದ ಒತ್ತಡವು ಮುಂಬರುವ ವರ್ಷಗಳಲ್ಲಿ ಬೆಳವಣಿಗೆಗೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಸೇವಾ ವಲಯದ ಕಂಪನಿಗಳು ಆತಂಕ ವ್ಯಕ್ತಪಡಿಸಿವೆ. ಐತಿಹಾಸಿಕ ಮಟ್ಟದ ಬೆಳವಣಿಗೆ ಕಂಡಿದ್ದರೂ ವ್ಯಾಪಾರ ನಡೆಸುವುದಕ್ಕೆ ಸಂಬಂಧಿಸಿದ ವಿಶ್ವಾಸವು ಮಂದಗತಿಯಲ್ಲಿಯೇ ಇದೆ ಎಂದು ಐಎಚ್‌ಎಸ್‌ ಮರ್ಕಿಟ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ.ಲಿಮಾ ಹೇಳಿದ್ದಾರೆ.

ಕಂಪನಿಗಳು ಹೆಚ್ಚುವರಿ ಕೆಲಸಗಾರರನ್ನು ನೇಮಿಸಿಕೊಳ್ಳುವುದನ್ನು ಅಕ್ಟೋಬರ್‌ನಲ್ಲಿಯೂ ಮುಂದುವರಿಸಿವೆ. ಉದ್ಯೋಗ ಸೃಷ್ಟಿಯು ಮಧ್ಯಮ ಮಟ್ಟದಲ್ಲಿ ಇದ್ದರೂ ಸೆಪ್ಟೆಂಬರ್‌ನಿಂದ ಅದು ಚುರುಕು ಪಡೆದುಕೊಂಡಿದೆ.

ಭಾರತದ ಸೇವೆಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯು ದುರ್ಬಲವಾಗಿದೆ ಎನ್ನುವುದನ್ನು ಈಚಿನ ಅಂಕಿ–ಅಂಶಗಳು ಸೂಚಿಸುತ್ತಿವೆ. ಅಕ್ಟೋಬರ್‌ನಲ್ಲಿ ಹೊಸ ರಫ್ತು ವ್ಯಾಪಾರವು ಇಳಿಕೆ ಆಗಿದೆ. ಕೋವಿಡ್‌–19 ಸಾಂಕ್ರಾಮಿಕವು ಉಲ್ಬಣಗೊಂಡ ನಂತರ ಭಾರತದ ಸೇವೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯ ಇಳಿಮುಖ ಆಗಲಾರಂಭಿಸಿದೆ ಎಂದು ಸಂಸ್ಥೆಯು ಹೇಳಿದೆ.

ತಯಾರಿಕೆ ಮತ್ತು ಸೇವಾ ವಲಯದ ಒಟ್ಟಾರೆ ಬೆಳವಣಿಗೆಯನ್ನು ಸೂಚಿಸುವ ಕಂಪೋಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್ ಸೆಪ್ಟೆಂಬರ್‌ನಲ್ಲಿ 55.3ರಷ್ಟು ಇದ್ದಿದ್ದು ಅಕ್ಟೋಬರ್‌ನಲ್ಲಿ 58.7ಕ್ಕೆ ಏರಿಕೆ ಆಗಿದೆ. 2012ರ ಜನವರಿಯ ಬಳಿಕ ತಿಂಗಳೊಂದರ ಅತ್ಯಂತ ವೇಗದ ಬೆಳವಣಿಗೆ ಇದು.

ಖಾಸಗಿ ವಲಯದಲ್ಲಿನ ಉದ್ಯೋಗವು ಸತತ ಎರಡನೇ ತಿಂಗಳಿನಲ್ಲಿಯೂ ಏರಿಕೆ ಆಗಿದೆ ಎನ್ನುವುದನ್ನು ಅಕ್ಟೋಬರ್‌ ತಿಂಗಳ ಅಂಕಿ–ಅಂಶ ಸೂಚಿಸುತ್ತಿದೆ. ಆದರೆ ಸರಕು ಉತ್ಪಾದಕರಲ್ಲಿ ಆಗಿದ್ದ ಉದ್ಯೋಗ ಕಡಿತದೊಂದಿಗೆ ಭಾಗಶಃ ಸರಿದೂಗಿಸಲ್ಪಟ್ಟಿರುವುದರಿಂದ ಉದ್ಯೋಗ ಬೆಳವಣಿಗೆ ದರವು ಅಲ್ಪ ಮಟ್ಟದ್ದಾಗಿದೆ ಎಂದು ತಿಳಿಸಿದೆ. ಸರಕುಗಳ ಉತ್ಪಾದಕರಲ್ಲಿ ಆಶಾವಾದ ಮರುಕಳಿಸುತ್ತಿದೆ. ಹೀಗಾಗಿ ಖಾಸಗಿ ವಲಯದ ಕಂಪನಿಗಳ ವ್ಯಾಪಾರ ನಡೆಸುವ ವಿಶ್ವಾಸವು ಅಕ್ಟೋಬರ್‌ನಲ್ಲಿ ಮತ್ತಷ್ಟು ಬಲಗೊಂಡಿದೆ ಎಂದು ಸಂಸ್ಥೆಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.