ADVERTISEMENT

ಫೆಬ್ರುವರಿಯಲ್ಲಿ ಸೇವಾ ವಲಯದ ಚಟುವಟಿಕೆ ಹೆಚ್ಚಳ

ಪಿಟಿಐ
Published 3 ಮಾರ್ಚ್ 2021, 17:01 IST
Last Updated 3 ಮಾರ್ಚ್ 2021, 17:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಯು ಫೆಬ್ರುವರಿ ತಿಂಗಳಲ್ಲಿ ಒಂದು ವರ್ಷದ ಅವಧಿಯ ಅತ್ಯಂತ ವೇಗದ ಬೆಳವಣಿಗೆ ದಾಖಲಿಸಿದೆ. ಇದೇ ವೇಳೆ, ಉದ್ಯೋಗ ಲಭ್ಯತೆ ಇನ್ನಷ್ಟು ಕಡಿಮೆಯಾಗಿದೆ. ಕಂಪನಿಗಳ ಒಟ್ಟಾರೆ ವೆಚ್ಚವು ಭಾರಿ ಏರಿಕೆ ಕಂಡಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ ಸಂಸ್ಥೆ ಹೇಳಿದೆ.

ಸೇವಾ ವಲಯದ ಚಟುವಟಿಕೆಯನ್ನು ತಿಳಿಸುವ ಸೂಚ್ಯಂಕವು ಜನವರಿಯಲ್ಲಿ 52.8ರಷ್ಟು ಇದ್ದಿದ್ದು ಫೆಬ್ರುವರಿಯಲ್ಲಿ 55.3ಕ್ಕೆ ಏರಿಕೆಯಾಗಿದೆ. ಬೇಡಿಕೆಯಲ್ಲಿ ಸುಧಾರಣೆ ಮತ್ತು ಅನುಕೂಲಕರ ಮಾರುಕಟ್ಟೆ ಸ್ಥಿತಿಗಳಿಂದಾಗಿ ಸೇವಾ ಚಟುವಟಿಕೆಗಳು ಒಂದು ವರ್ಷದಲ್ಲಿಯೇ ಅತ್ಯಂತ ವೇಗವಾದ ಬೆಳವಣಿಗೆ ಕಂಡಿವೆ ಎಂದು ತಿಳಿಸಿದೆ.

ತಯಾರಿಕೆ ಮತ್ತು ಸೇವಾ ವಲಯದ ಒಟ್ಟಾರೆ ಬೆಳವಣಿಗೆಯನ್ನು ಸೂಚಿಸುವ ಕಾಂಪೊಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್ ಜನವರಿಯಲ್ಲಿ 55.8ರಷ್ಟು ಇದ್ದಿದ್ದು ಫೆಬ್ರುವರಿಯಲ್ಲಿ 57.3ಕ್ಕೆ ಏರಿಕೆಯಾಗಿದೆ.

ADVERTISEMENT

‘2020–21ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುವ ನಿರೀಕ್ಷೆ ಮಾಡಲಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ತಯಾರಿಕಾ ವಲಯ ಉತ್ತಮ ಬೆಳವಣಿಗೆ ಕಾಣಲಿದೆ ಎನ್ನುವ ಸೂಚನೆ ದೊರೆತಿದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ. ಲಿಮಾ ಹೇಳಿದ್ದಾರೆ.

ತಯಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಮತ್ತಷ್ಟು ಉದ್ಯೋಗ ನಷ್ಟಗಳು ಕಂಡುಬಂದಿವೆ. ಇದು ಮುಂಬರುವ ತಿಂಗಳುಗಳಲ್ಲಿ ದೇಶದಲ್ಲಿ ಖರೀದಿ ಸಾಮರ್ಥ್ಯವನ್ನು ತಗ್ಗಿಸಬಹುದಾಗಿದೆ. ಆದಾಗ್ಯೂ, ವ್ಯಾಪಾರ–ವಹಿವಾಟು ನಡೆಸುವ ವಿಶ್ವಾಸ ವೃದ್ಧಿ, ಕೋವಿಡ್‌–19ಗೆ ಲಸಿಕೆ ನೀಡುವ ಕಾರ್ಯಕ್ರಮದ ವಿಸ್ತರಣೆಯಿಂದಾಗಿ ಉದ್ಯೋಗದ ಬೆಳವಣಿಗೆಗೆ ಸಂಬಂಧಿಸಿದಂತೆ ಉತ್ತಮ ದಿನಗಳು ನಮ್ಮ ಮುಂದಿವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಸರಕು ಸಾಗಣೆ ವೆಚ್ಚ ಹೆಚ್ಚಳ, ಇಂಧನ ಮತ್ತು ರಿಟೇಲ್‌ ದರ ಏರಿಕೆಯಿಂದಾಗಿ ಫೆಬ್ರುವರಿಯಲ್ಲಿ ಕಂಪನಿಗಳ ಒಟ್ಟಾರೆ ವೆಚ್ಚವು ತೀವ್ರ ಏರಿಕೆಯಾಗಿದೆ. ಸದ್ಯದ ಮಟ್ಟಿಗೆ ಕಂಪನಿಗಳು ತಮ್ಮ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ. ತಮ್ಮ ಹೆಚ್ಚುವರಿ ವೆಚ್ಚದ ಹೊರೆಗಳನ್ನು ಗ್ರಾಹಕರಿಗೆ ವರ್ಗಾಯಿಸಲು ಆರಂಭಿಸಿದ ಬಳಿಕ ಬೇಡಿಕೆಯ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.